ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರಾಕರಣೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ತಾಯಿ
ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣ

ಅಹ್ಮದಾಬಾದ್,ಮಾ.27: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಡಿ.ಜಿ.ವಂಝಾರಾ ಮತ್ತು ಎನ್.ಕೆ.ಅಮೀನ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲು ಗುಜರಾತ್ ಸರಕಾರದ ನಿರಾಕರಣೆಯನ್ನು ಪ್ರಶ್ನಿಸಿ ಇಶ್ರತ್ ತಾಯಿ ಶಮೀಮಾ ಕೌಸರ್ ಅವರು ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಗುಜರಾತ್ ಸರಕಾರದ ಪತ್ರದ ಪ್ರತಿಯನ್ನು ತನಗೆ ಒದಗಿಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.
ಕಲಂ 197ರಡಿ ಗುಜರಾತ್ ಸರಕಾರವು ತನ್ನ ನಿವೃತ್ತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿಯನ್ನು ನಿರಾಕರಿಸಿದೆ ಎಂದು ಈ ಮೊದಲು ಸಿಬಿಐ ವಕೀಲ ಆರ್.ಸಿ.ಕೊಡೇಕರ್ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಜೆ.ಕೆ.ಪಾಂಡ್ಯ ಅವರಿಗೆ ತಿಳಿಸಿದ್ದರು.
ಪೊಲೀಸರು ನಡೆಸಿದ್ದ ಎನ್‌ಕೌಂಟರ್ ಅಸಲಿಯಾಗಿತ್ತು ಮತ್ತು ಅವರ ಕರ್ತವ್ಯಕ್ಕೆ ಅನುಗುಣವಾಗಿತ್ತು ಎಂದು ರಾಜ್ಯ ಸರಕಾರದ ಪತ್ರದಲ್ಲಿ ಹೇಳಲಾಗಿದೆ.
ಮಾಜಿ ಡಿಐಜಿ ವಂಝಾರಾ ಮತ್ತು ನಿವೃತ್ತ ಎಸ್‌ಪಿ ಅಮೀನ್ ಅವರು ಪ್ರಕರಣದಲ್ಲಿ ಸಿಬಿಐನಿಂದ ದೋಷಾರೋಪಣೆಗೊಳಗಾಗಿರುವ ಏಳು ಆರೋಪಿಗಳಲ್ಲಿ ಸೇರಿದ್ದಾರೆ.
2004,ಜೂ.15ರಂದು ಮುಂಬೈ ಸಮೀಪದ ಮುಂಬ್ರಾ ನಿವಾಸಿ ಜಹಾನ್(19) ಹಾಗೂ ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ ಪಿಳ್ಳೈ, ಅಮ್ಜದಲಿ ಅಕ್ಬರಲಿ ರಾಣಾ ಮತ್ತು ಝೀಶಾನ್ ಜೋಹರ್ ಅವರು ಅಹ್ಮದಾಬಾದ್‌ನ ಹೊರವಲಯದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದರು. ಹತ ವ್ಯಕ್ತಿಗಳು ಭಯೋತ್ಪಾದಕರೊಂದಿಗೆ ಸಂಪರ್ಕಗಳನ್ನು ಹೊಂದಿದ್ದರು ಮತ್ತು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿಕೊಂಡಿದ್ದರು.
ಗುಜರಾತ್ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಸಿಬಿಐ ಅದು ‘ಪೂರ್ವಯೋಜಿತ’ ಎನ್‌ಕೌಂಟರ್ ಆಗಿತ್ತು ಎಂದು ಹೇಳಿತ್ತು.







