ನನ್ನ ಕುಟುಂಬದ ಮೇಲೆ ಐಟಿ ದಾಳಿಗೆ ಹುನ್ನಾರ: ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ
"ದಬ್ಬಾಳಿಕೆ ಮಾಡಿದರೆ ಮಮತಾ ಬ್ಯಾನರ್ಜಿ ಮಾಡಿದಂತೆ ಮಾಡಬೇಕಾಗುತ್ತದೆ"

#ದೂರವಾಣಿ ಕದ್ದಾಲಿಕೆ ಆರೋಪ ಆಧಾರ ರಹಿತ
ಬೆಂಗಳುರು, ಮಾ.27: ನಮ್ಮ ಕುಟುಂಬದ ಮೇಲೆ ರಾಜಕೀಯ ಷಡ್ಯಂತ್ರವನ್ನು ವ್ಯವಸ್ಥಿತವಾಗಿ ರೂಪಿಸಲಾಗುತ್ತಿದ್ದು ಐಟಿ ದಾಳಿ ನಡೆಸುವ ಹುನ್ನಾರ ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 250 ರಿಂದ 300 ಮಂದಿಯ ಐಟಿ ತಂಡ ನಮ್ಮ ಕುಟುಂಬದ ಮೇಲೆ ದಾಳಿ ನಡೆಸುವ ಷಡ್ಯಂತ್ರ ರೂಪಿಸಿರುವುದಾಗಿ ಬಿಜೆಪಿಯ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ. ದಾಳಿಗೆ ಹೆದರಿಕೊಳ್ಳಲು ನಾವೇನು ದರೋಡೆ ಮಾಡಿದ್ದೇವೆಯೇ ಎಂದು ಪ್ರಶ್ನಿಸಿ ಕೇಂದ್ರ ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.
ಐಟಿ ಅಧಿಕಾರಿಗಳು ಕೇಂದ್ರ ಸರಕಾರದ ಏಜೆಂಟ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅವರು ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ. ಕೇಂದ್ರದವರ ಬಗ್ಗೆ ಈ ಅಧಿಕಾರಿಗಳು ಎಚ್ಚರಿಕೆಯಿಂದ ಇರುವುದು ಸೂಕ್ತ. ಹೊಸ ನಗರದ ಬಳಿ 2 ಕೋಟಿ ರೂ. ಸೀಝ್ ಮಾಡ್ತಾರೆ. ಎಲ್ಲಿಂದ ಸೀಝ್ ಮಾಡಿದ್ರು. ಇದರ ಮಾಹಿತಿ ಬಹಿರಂಗ ಪಡಿಸಿದ್ದಾರಾ? ಇದಕ್ಕೆ ದಿಲ್ಲಿಯ ಐಟಿ ಅಧಿಕಾರಿ ಬಾಲಕೃಷ್ಣ ಹೊಣೆ ಎಂದು ನೇರವಾಗಿ ಹೇಳುತ್ತೇನೆ. ಅದ್ಯಾರ ಬಳಿ ಅದೆಷ್ಟು ಕಲೆಕ್ಷನ್, ವಸೂಲಿ ಮಾಡುತ್ತಾರೊ ನೋಡುತ್ತೇನೆ ಎಂದು ಕಿಡಿಕಾರಿದರು.
‘ನಾಳೆ ಬೆಳಗ್ಗೆ ದಾಳಿಗೆ ಸಿದ್ಧತೆ’
ಜೆಡಿಎಸ್, ಕಾಂಗ್ರೆಸ್ ಅಭಿಮಾನಿಗಳು ಐಟಿ ಅಧಿಕಾರಿಗಳ ಟಾರ್ಗೆಟ್ ಆಗಿದ್ದಾರೆ. 250ರಿಂದ 300 ಮಂದಿ ಐಟಿ ಅಧಿಕಾರಿಗಳು ನಾಳೆ ಬೆಳಗ್ಗೆ ಕರ್ನಾಟಕದಲ್ಲಿ ಐಟಿ ದಾಳಿ ನಡೆಸಲು ಸಿದ್ಧರಾಗಿದ್ದಾರೆ. ಐಟಿ ದಾಳಿಯಲ್ಲಿ ಸಾಮಾನ್ಯವಾಗಿ ರಾಜ್ಯ ಸರಕಾರದ ಪೊಲೀಸ್ ಇಲಾಖೆಯ ನೆರವು ತೆಗೆದುಕೊಳ್ಳುತ್ತಾರೆ. ಅದು ಬಿಟ್ಟು ಸಿಆರ್‌ಪಿಎಫ್ ಕರೆಸಿಕೊಂಡು ದಾಳಿ ಮಾಡಲು ಹೊರಟಿರುವುದು ಬಹಳ ದಿನ ನಡೆಯಲ್ಲ. ಒಂದೇ ಒಂದು ಪ್ರಕರಣದಲ್ಲಿ ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ ಹೇಳಲಿ. ನಾನು ನಮ್ಮ ಎಸಿಬಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇನೆ. ಆದರೆ ಐಟಿ ಅಧಿಕಾರಿಗಳು ಈ ರೀತಿ ದಬ್ಬಾಳಿಕೆ ಮಾಡಿದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ ಹಾಗೆ ನಾನೂ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದೂರವಾಣಿ ಕದ್ದಾಲಿಕೆ ಆರೋಪ ಆಧಾರ ರಹಿತವಾಗಿದೆ. ಈ ಬಗ್ಗೆ ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧನಿದ್ದೇನೆ. ಚುನಾವಣೆ ನೆಪದಲ್ಲಿ ತಮ್ಮ ವಿರುದ್ಧ ಸುಳ್ಳುಗಳನ್ನು ಸೃಷ್ಟಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ಪ್ರತಿಸ್ಪರ್ಧಿಗಳ ಈ ಹುನ್ನಾರಕ್ಕೆ ಮಾಧ್ಯಮಗಳು ಬೆಂಬಲವಾಗಿ ನಿಂತಿವೆ. ಯಾರು ಯಾರಿಗೆ ಬೇಕಾದರೂ ಬೆಂಬಲ ಘೋಷಿಸಿದರೂ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಜಿಲ್ಲೆಯ ಜನರೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಅವರ ಪರ ದುಡಿದಿದ್ದೇವೆ. ಅವರ ಬೆಂಬಲವನ್ನು ಕೇಳುತ್ತೇವೆ. ಕೊಡುತ್ತಾರೆಂಬ ವಿಶ್ವಾಸವೂ ಇದೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ







