ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಬ್ರೂಸ್ ಯಾರ್ಡ್ಲಿ ನಿಧನ

ಕ್ಯಾನ್‌ಬೆರಾ, ಮಾ.27: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಸ್ಟ್ರೇಲಿಯದ ಮಾಜಿ ಬೌಲರ್ ಹಾಗೂ ಪ್ರಭಾವಿ ಕೋಚ್ ಬ್ರೂಸ್ ಯಾರ್ಡ್ಲಿ ಬುಧವಾರ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಪಾರಮ್ಯವಿದ್ದ ಕಾಲದಲ್ಲಿ ಯಾರ್ಡ್ಲಿ ಮಧ್ಯಮ ವೇಗಿಯಾಗಿ ತಂಡಕ್ಕೆ ಸೇರಿಕೊಂಡರು. ಆ ಬಳಿಕ ಆಫ್-ಸ್ಪಿನ್ನರ್ ಆಗಿ ಬದಲಾದರು. ತಮ್ಮ 30ನೇ ವಯಸ್ಸಿನಲ್ಲಿ ಅವರು ಆಸ್ಟ್ರೇಲಿಯ ತಂಡಕ್ಕೆ ಪ್ರವೇಶ ಮಾಡಿದರು.
33 ಟೆಸ್ಟ್ ಪಂದ್ಯಗಳಿಂದ 126 ವಿಕೆಟ್ ಪಡೆದಿದ್ದ ಅವರು, 24 ವರ್ಷಗಳ ಅವಧಿಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 344 ವಿಕೆಟ್ ಉಡಾಯಿಸಿದ್ದರು.
‘‘ಆನ್‌ಫೀಲ್ಡ್ ಹಾಗೂ ಆಫ್‌ಫೀಲ್ಡ್‌ನಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ಗೆ ಗಣನೀಯ ಸೇವೆ ಸಲ್ಲಿಸಿದ ಬ್ರೂಸ್ ಉತ್ತಮ ವ್ಯಕ್ತಿತ್ವದವರಾಗಿದ್ದರು’’ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಕೆವಿನ್ ರಾಬರ್ಟ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಅಂಗಣದ ಹೊರಗೆ ಉತ್ತಮ ಸಂವಹನಾ ವ್ಯಕ್ತಿತ್ವ ಹೊಂದಿದ್ದ ಬ್ರೂಸ್ ಜಗತ್ತಿನ ಅತ್ಯುತ್ತಮ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು’’ ಎಂದು ಶ್ರೀಲಂಕಾ ಸ್ಪಿನ್ ದಂತಕತೆ ಮುತ್ತಯ್ಯ ಮರಳೀಧರನ್ ಹೇಳಿದ್ದಾರೆ.





