ಬೀಜಿಂಗ್, ಮ್ಯೂನಿಕ್ ಶೂಟಿಂಗ್ ವಿಶ್ವಕಪ್‌ನಲ್ಲಿ ಒಲಿಂಪಿಕ್ಸ್ ಕೋಟಾ
ಹೊಸದಿಲ್ಲಿ, ಮಾ.27: ಇಬ್ಬರು ಪಾಕಿಸ್ತಾನದ ಶೂಟರ್‌ಗಳಿಗೆ ಭಾರತ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಿಂದ ಹಿಂದಕ್ಕೆ ಪಡೆಯಲಾಗಿದ್ದ 25 ಮೀ. ಏರ್ ಪಿಸ್ತೂಲ್ ವಿಭಾಗದ ಎರಡು ಒಲಿಂಪಿಕ್ಸ್ ಕೋಟಾವನ್ನು ಮುಂಬರುವ ಬೀಜಿಂಗ್ ಹಾಗೂ ಮ್ಯೂನಿಕ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಅಳವಡಿಸಲಾಗುತ್ತದೆ.
ಬೀಜಿಂಗ್ ವಿಶ್ವಕಪ್ ಎ.21ರಿಂದ 28ರ ತನಕ ನಡೆದರೆ, ಮ್ಯೂನಿಕ್ ವಿಶ್ವಕಪ್ ಮೇ 24ರಿಂದ 31ರ ತನಕ ನಡೆಯಲಿದೆ ಎಂದು ಅಂತರ್‌ರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ(ಐಎಸ್‌ಎಸ್‌ಎಫ್)ತಿಳಿಸಿದೆ.
‘‘ಹೊಸದಿಲ್ಲಿಯಲ್ಲಿ 2019ರ ಫೆಬ್ರವರಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಹಿಂಪಡೆಯಲಾಗಿದ್ದ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯ ಎರಡು ಒಲಿಂಪಿಕ್ಸ್ ಕೋಟಾವನ್ನು ಬೀಜಿಂಗ್ ಹಾಗೂ ಮ್ಯೂನಿಕ್‌ನಲ್ಲಿ ನಡೆಯುವ ವಿಶ್ವಕಪ್ ವೇಳೆ ಮತ್ತೊಮ್ಮೆ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ’’ ಎಂದು ಐಎಸ್‌ಎಸ್‌ಎಫ್ ತಿಳಿಸಿದೆ. ಪುಲ್ವಾಮದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಗೆ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಶೂಟರ್‌ಗಳಿಗೆ ದಿಲ್ಲಿಯಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸಲು ವೀಸಾ ನಿರಾಕರಿಸಲಾಗಿತ್ತು.
ಪಾಕಿಸ್ತಾನದ ಇಬ್ಬರು ಶೂಟರ್‌ಗಳಾದ ಜಿಎಂ ಬಶೀರ್ ಹಾಗೂ ಖಲೀಲ್ ಅಹ್ಮದ್ ರ್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸುವ ಸಾಧ್ಯತೆಯಿತ್ತು.
ವೀಸಾ ನಿರಾಕರಣೆ ಹಾಗೂ ಎರಡು ಕೋಟಾವನ್ನು ಹಿಂದಕ್ಕೆ ಪಡೆದಿರುವುದಕ್ಕೆ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕೆಂಡಾಮಂಡಲವಾಗಿದ್ದು, ಮುಂಬರುವ ಟೂರ್ನಿಗಳ ಆತಿಥ್ಯದ ಕುರಿತಂತೆ ಭಾರತದೊಂದಿಗೆ ಮಾತುಕತೆ ನಡೆಸುವುದನ್ನು ನಿಲ್ಲಿಸಿತ್ತು. ಭಾರತಕ್ಕೆ ಟೂರ್ನಿಯ ಆತಿಥ್ಯ ನೀಡದಂತೆ ಇತರ ಅಂತರ್‌ರಾಷ್ಟ್ರೀಯ ಒಕ್ಕೂಟಗಳಿಗೆ ಐಒಸಿ ತಾಕೀತು ಮಾಡಿತ್ತು. ಹೀಗಾಗಿ ಭಾರತ ಏಶ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್, ಜೂನಿಯರ್ ಡೇವಿಸ್ ಕಪ್ ಹಾಗೂ ಜೂನಿಯರ್ ವಿಶ್ವಕಪ್ ಆತಿಥ್ಯವನ್ನು ಕಳೆದುಕೊಂಡಿದೆ.







