ಇಂಡಿಯಾ ಓಪನ್: ಸಿಂಧು, ಶ್ರೀಕಾಂತ್ ಶುಭಾರಂಭ
ಹೊಸದಿಲ್ಲಿ, ಮಾ.27: ಮಾಜಿ ಚಾಂಪಿಯನ್‌ಗಳಾದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಇಲ್ಲಿ ಬುಧವಾರ ನಡೆದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಕಳೆದ ಎರಡು ಆವೃತ್ತಿಯ ಟೂರ್ನಿಗಳಲ್ಲಿ ಫೈನಲ್‌ಗೆ ತಲುಪಿದ್ದ ಸಿಂಧು 2017ರಲ್ಲಿ ಪ್ರಶಸ್ತಿ ಜಯಿಸಿದ್ದರು. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಸಹ ಆಟಗಾರ್ತಿ ಮುಗ್ದಾ ಅಗ್ರೆ ಅವರನ್ನು 21-8, 21-13 ನೇರ ಗೇಮ್‌ಗಳಿಂದ ಮಣಿಸಿದರು.
ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 2015ರ ಚಾಂಪಿಯನ್ ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 21-16, 18-21, 21-19 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಸೋಲಿನ ಭೀತಿಯಿಂದ ಪಾರಾಗಿ ವಿನ್ಸೆಂಟ್ ವಿರುದ್ಧ ಸತತ ನಾಲ್ಕನೇ ಗೆಲುವು ದಾಖಲಿಸಿದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ ಮೊದಲ ಗೇಮ್‌ನಲ್ಲಿ 14-21 ಅಂತರದಿಂದ ಸೋತಿದ್ದರೂ, ಆ ಬಳಿಕ 21-18 ಹಾಗೂ 21-14 ಗೇಮ್‌ಗಳಿಂದ ಥಾಯ್ಲೆಂಡ್‌ನ 8ನೇ ಶ್ರೇಯಾಂಕದ ಕಂಟಫೋನ್ ವಾಂಗ್‌ಚರೊಯೆನ್‌ರನ್ನು ಸೋಲಿಸಿದರು. 5ನೇ ಶ್ರೇಯಾಂಕದ ಸಮೀರ್ ವರ್ಮಾ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ಅವರನ್ನು 21-18, 21-12 ಗೇಮ್‌ಗಳಿಂದ ಸೋಲಿಸಿದರು. ರಿಯಾ ಮುಖರ್ಜಿ ಥಾಯ್ಲೆಂಡ್‌ನ ಫಿಟ್ಟಯಪರ್ನ್ ಚೈವಾನ್‌ರನ್ನು 21-17, 21-15 ಗೇಮ್‌ಗಳಿಂದ ಮಣಿಸಿದ್ದಾರೆ.
ಸ್ವಿಸ್ ಓಪನ್ ಫೈನಲಿಸ್ಟ್ ಬಿ.ಸಾಯಿ ಪ್ರಣೀತ್ ಮೊದಲ ಗೇಮ್ ಸೋಲಿನಿಂದ ಚೇತರಿಸಿಕೊಂಡು ಸಹ ಆಟಗಾರ ಕೆ.ಗುಲ್ಶನ್ ಕುಮಾರ್‌ರನ್ನು 22-24, 21-13, 21-8 ಗೇಮ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.
ಡಬಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ತಮ್ಮದೇ ದೇಶದ ಯುವ ಆಟಗಾರರಾದ ರವಿ ಹಾಗೂ ಲಕ್ಷ ಸರೊಹಾರನ್ನು 21-14,21-7 ಗೇಮ್‌ಗಳಿಂದಲೂ, ಪ್ರಣಯ್ ಚೋಪ್ರಾ ಹಾಗೂ ಶಿವಂ ಶರ್ಮಾ ಜೋಡಿ ಸೆಂಥಿಲ್ ವೆಲ್ ಗೋವಿಂದಅರಸು ಹಾಗೂ ವೆಂಬರಸನ್ ವೆಂಕಟಾಚಲಂರನ್ನು 21-13, 21-13 ಅಂತರದಿಂದ ಗೆಲುವು ದಾಖಲಿಸಿದರು.







