ಕೊಲಿಜಿಯಂ ವ್ಯವಸ್ಥೆಯ ಮೂಲಕ ಚುನಾವಣಾ ಆಯುಕ್ತರ ನೇಮಕವಾಗಲಿ:ಮಾಜಿ ಸಿಇಸಿ ಕುರೈಷಿ

ಹೈದರಾಬಾದ್,ಮಾ.28: ನ್ಯಾಯಾಧೀಶರು,ಮುಖ್ಯ ಮಾಹಿತಿ ಆಯುಕ್ತ ಮತ್ತು ಮುಖ್ಯ ಜಾಗೃತ ಆಯುಕ್ತರ ಆಯ್ಕೆಯ ಮಾದರಿಯಲ್ಲಿ ಚುನಾವಣಾ ಆಯುಕ್ತರನ್ನು ನೇಮಕಗೊಳಿಸಲು ಕೊಲಿಜಿಯಂ ವ್ಯವಸ್ಥೆಯೊಂದು ಇರಬೇಕು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಎಸ್.ವೈ.ಕುರೈಷಿ ಅವರು ಗುರುವಾರ ಇಲ್ಲಿ ಸಲಹೆ ನೀಡಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು,ಇತ್ತೀಚಿಗೆ ಚುನಾವಣಾ ಆಯೋಗದ ವಿರುದ್ಧ ಬೆಟ್ಟು ಮಾಡಲಾಗುತ್ತಿದೆ. ಕೊಲಿಜಿಯಂ ವ್ಯವಸ್ಥೆಯ ಮೂಲಕ ಚುನಾವಣಾ ಆಯುಕ್ತರು ನೇಮಕಗೊಂಡಿದ್ದರೆ ಇಂತಹುದು ಸಂಭವಿಸುತ್ತಿರಲಿಲ್ಲ. ಚುನಾವಣಾ ಆಯುಕ್ತರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದರೂ ಯಾರಾದರೂ ಬೆಟ್ಟು ತೋರಿಸಿದರೆ ಅದು ಅವರ ಪಾಲಿಗೂ ಅನ್ಯಾಯವಾಗುತ್ತದೆ,ನೈತಿಕ ಸ್ಥೈರ್ಯವನ್ನು ಉಡುಗಿಸುತ್ತದೆ ಎಂದರು.
ಹಾಲಿ ಪದ್ಧತಿಯಂತೆ ಚುನಾವಣಾ ಆಯುಕ್ತರನ್ನು ಸರಕಾರವೇ ನೇಮಕಗೊಳಿಸುತ್ತದೆ.
ಹೀಗಾಗಿ ನ್ಯಾಯಾಂಗ,ಸಿಐಸಿ ಮತ್ತು ಸಿವಿಸಿಯಲ್ಲಿ ನಡೆಯುವಂತೆ ಚುನಾವಣಾ ಆಯುಕ್ತರ ನೇಮಕಕ್ಕೂ ಕೊಲಿಜಿಯಂ ವ್ಯವಸ್ಥೆಯಿರಬೇಕು ಎಂದರು. ಇದಕ್ಕಾಗಿ ರಾಜಕೀಯ ಸಹಮತವನ್ನು ಮೂಡಿಸಬಹುದಾಗಿದೆ ಎಂದರು.





