ಅಭ್ಯರ್ಥಿಗೆ 14 ದಿನ ಜೈಲು: ಕೇರಳ ಬಿಜೆಪಿಗೆ ಆಘಾತ

ತಿರುವನಂತಪುರಂ,ಮಾ.28: ಇನ್ನೇನು ಲೋಕಸಭಾ ಚುನಾವಣೆಗೆ ಕೆಲವು ವಾರಗಳಷ್ಟೇ ಉಳಿದಿರುವಾಗ ಕೇರಳ ಬಿಜೆಪಿಗೆ ಆಘಾತ ನೀಡುವ ಬೆಳವಣಿಗೆಯೊಂದರಲ್ಲಿ ಕಳೆದ ವರ್ಷ ಶಬರಿಮಲೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕೇರಳ ನ್ಯಾಯಾಲಯ ಬಿಜೆಪಿ ಅಭ್ಯರ್ಥಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕೋಝಿಕ್ಕೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಬಾಬು ಎಂಬವರಿಗೆ ಪಟ್ಟಣಂತಿಟ್ಟ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಶಬರಿಮಲೆ ದೇಗುಲಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ಹಿನ್ನೆಲೆಯಲ್ಲಿ ನಡೆದ ಗಲಭೆಯ ಸಮಯದಲ್ಲಿ ಆರೋಪಿ ಬಿಜೆಪಿ ಅಭ್ಯರ್ಥಿ ಮಧ್ಯ ವಯಸ್ಕ ಮಹಿಳೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೂ ಮೊದಲು ನಿರೀಕ್ಷಣಾ ಜಾಮೀನು ಕೋರಿ ಪ್ರಕಾಶ್ ಬಾಬು ಸಲ್ಲಿಸಿದ್ದ ಮನವಿಯನ್ನು ಕೇರಳ ಉಚ್ಚ ನ್ಯಾಯಾಲಯ ತಳ್ಳಿಹಾಕಿತ್ತು. ಶಬರಿಮಲೆ ಹಿಂಸಾಚಾರಕ್ಕೆ ಸಂಬಂಧಿಸಿ ಇನ್ನೂ ಏಳು ಹಲ್ಲೆ ಪ್ರಕರಣಗಳಲ್ಲಿ ಬಾಬು ಆರೋಪಿಯಾಗಿದ್ದಾರೆ.
ಪಟ್ಟಣಂತಿಟ್ಟ ಲೋಕಸಭಾ ಕ್ಷೇತ್ರದಿಂದ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಕಣಕ್ಕಿಳಿದಿದ್ದು ಶಬರಿಮಲೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಆರಂಭದಲ್ಲಿ ಸುರೇಂದ್ರನ್ ಅವರನ್ನು ಬಂಧಿಸಲಾಗಿತ್ತು.





