ಹಾಸನ ಲೋಕೋಪಯೋಗಿ ಕಚೇರಿ, ರೇವಣ್ಣ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ
ಮಹತ್ವದ ದಾಖಲೆ ಪರಿಶೀಲನೆ

ಹಾಸನ,ಮಾ.28: ಈಗಾಗಲೇ ಲೋಕಸಭೆ ಚುನಾವಣೆ ಘೋಷಣೆಗೊಂಡು ನಾಮಪತ್ರ ಸಲ್ಲಿಸಿದ ಬೆನ್ನಲ್ಲೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಬೆಂಬಲಿಗರ ಮನೆ ಮೇಲೆ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ಮೇಲೆ ಇಂದು ಬೆಳಗ್ಗೆ ಒಟ್ಟು 50 ಕಾರಿನಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದು, ಮಹತ್ವದ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ, ಚನ್ನರಾಯಪಟ್ಟಣ ಮತ್ತು ಅರಕಲಗೂಡಿಗೆ ಐಟಿ ಅಧಿಕಾರಿಗಳ ತಂಡ ದಿಡೀರ್ ಭೇಟಿ ನೀಡಿ, ರೇವಣ್ಣ ಅವರ ಆಪ್ತರು ಎನ್ನಲಾದ ನಾರಾಯಣಗೌಡ, ಅಶ್ವಥ್ ನಾರಾಯಣ ರೆಡ್ಡಿ, ಸೈಯ್ಯದ್ ಹಫೀಜ್, ಗುತ್ತಿಗೆದಾರ ಕೃಷ್ಣೇಗೌಡ, ಅರಕಲಗೂಡಿನ ಗುತ್ತಿಗೆದಾರ ಶಿವಮೂರ್ತಿ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ತಿಳಿದು ಬಂದಿದೆ.
ಐಟಿ ದಾಳಿಗೊಳಗಾದವರೆಲ್ಲರೂ ರೇವಣ್ಣ ಅವರ ಆಪ್ತರು ಎಂದು ಹೇಳಲಾಗುತ್ತಿದೆ. ಅಲ್ಲದೆ ಗುತ್ತಿಗೆದಾರರಾಗಿರುವ ಅವರು ಕೋಟ್ಯಂತರ ರೂ. ಕಾಮಗಾರಿ ನಡೆಸಿದ್ದಾರೆ ಎನ್ನಲಾಗಿದೆ. ಹಾಸನ ನಗರದಲ್ಲಿರುವ ಪಿಡಬ್ಲ್ಯೂಡಿ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ತಪಾಸಣೆ ಕೈಗೊಂಡಿದ್ದಾರೆ. 2 ಇನ್ನೋವಾ ವಾಹನದಲ್ಲಿದ್ದ 8 ಅಧಿಕಾರಿಗಳ ತಂಡ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.
ಲೋಕೋಪಯೋಗಿ ಇಲಾಖೆ ಮಾಡಿದ ಖರ್ಚು, ವ್ಯಯದ ಬಗ್ಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕುಗಳ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತುತ ಎಷ್ಟು ಅನುದಾನ ಬಿಡುಗಡೆಯಾಗಿದೆ ಹಾಗೂ ಆಯಾ ತಾಲೂಕುಗಳ ಇಲಾಖೆಗಳಿಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬುದರ ಬಗ್ಗೆಯೂ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.







