ಅಕ್ರಮ ಸ್ಫೋಟಕ ವಸ್ತು ದಾಸ್ತಾನು: ಐವರು ಆರೋಪಿಗಳ ಬಂಧನ

ಮಡಿಕೇರಿ, ಮಾ.28 : ಮನೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕುಶಾಲನಗರ ಸಮೀಪದ ಸುಂದರನಗರದ ನಿವಾಸಿಗಳಾದ ಆರ್.ಮಂಜು(37) ಕುಬೇರ(45), ಮಣಿ (33) ಬೈಚನಹಳ್ಳಿಯ ಕೆ.ಆರ್.ರವಿ (31) ಬೆಟ್ಟದಪುರ ಹಲಗನಹಳ್ಳಿಯ ರಿಝ್ವಾನ್ ಅಹಮದ್ (54) ಎಂದು ಗುರುತಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸುಂದರನಗರದ ಮಂಜು ಎಂಬವರ ಮನೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಪರಿಶೀಲಿಸಿದಾಗ ಮನೆಯಲ್ಲಿ 21 ಎಲೆಕ್ಟ್ರಿಕಲ್ ಡಿಟೋನೇಟರ್, 200 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್, 239 ಅಮೋನಿಯಂ ನೈಟ್ರೇಟ್ ಜೆಲ್ ಟ್ಯೂಬ್‍ಗಳು, ತಲಾ 5ಕೆಜಿಯ 5 ಪ್ಯಾಕೇಟ್ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಹಾಗೂ 14 ರೋಲ್ ಸೇಫ್ಟಿ ಫ್ಯೂಸ್‍ಗಳು ಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಪೊಲೀಸರು ಸ್ಫೊಟಕ ವಸ್ತುಗಳ ಅಧಿನಿಯಮ-1908ರ ಕಲಂ 5ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದು, ಬಂಧಿತರಲ್ಲಿ ಮಂಜು, ಮಣಿ ಹಾಗೂ ರವಿ ಕೂಲಿ ಕಾರ್ಮಿಕರಾಗಿದ್ದು, ಕುಬೇರ ಆಟೋ ಚಾಲಕ ಮತ್ತು ರಿಝ್ವಾನ್ ಕೃಷಿಕ ಎಂದು ಹೇಳಲಾಗಿದೆ. ಆದರೆ ಇವರು ಇಷ್ಟೊಂದು ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವ ಕಾರಣಕ್ಕೆ ದಾಸ್ತಾನು ಇರಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರ ಮಾರ್ಗದರ್ಶನ ಹಾಗೂ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್‍ಕುಮಾರ್ ಅವರ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ನಂದೀಶ್‍ಕುಮಾರ, ಜಗದೀಶ್, ವಿಶೇಷ ಅಪರಾಧ ಪತ್ತೆ ತಂಡದ ದಯಾನಂದ, ಸಜಿ, ಸುರೇಶ್‍ಮ ಜೋಸೆಫ್, ಅಜಿತ್, ಸುಧೀಶ್‍ಕುಮಾರ, ಪ್ರಕಾಶ್, ಅರುಣ, ಮನೋಜ್, ನಾಗರಾಜ್, ಶಾಫಿನ್ ಅಹ್ಮದ್, ಸಂಪತ್ ರೈ, ಚಾಲಕರಾದ ಗಣೇಶ್, ಪ್ರವೀಣ್, ರಾಜ ಹಾಗೂ ಕೊಡಗು ಬಾಂಬ್ ನಿಷ್ಕ್ರಿಯದಳದ ತಜ್ಞ ಜಿತೇಂದ್ರ ರೈ ಮತ್ತು ಶಿವಾನಂದ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.









