ಗೆದ್ದ ಬಳಿಕ ಸುಮಲತಾ ಬಿಜೆಪಿ ಸೇರುತ್ತಾರೆ: ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿಶ್ವಾಸ

ವಿಜಯಪುರ, ಮಾ.28: ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್‌ಗೆ ನಮ್ಮ ಪಕ್ಷ ಬೆಂಬಲ ನೀಡಿದೆ. ಅವರು ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ. ಅವರು ಗೆದ್ದ ಬಳಿಕ ಬಿಜೆಪಿ ಸೇರುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಿ ಕೈ ಸುಟ್ಟುಕೊಂಡಿದ್ದೇವೆ. ಹೀಗಾಗಿ ಸುಮಲತಾ ಅಂಬರೀಷ್‌ಗೆ ನಾವು ಬೆಂಬಲ ನೀಡಿದ್ದೇವೆ. ಈಗಾಗಲೇ ಪಕ್ಷದ ನಾಯಕರೊಂದಿಗೆ ಬೆಂಬಲ ನೀಡುವ ಕುರಿತು ಸುಮಲತಾ ಮಾತುಕತೆ ಮಾಡಿದ್ದಾರೆ. ಗೆದ್ದ ಬಳಿಕ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಮೋದಿ ನೋಡಿ ಮತ ಹಾಕಿ: ಚುನಾವಣೆಯಲ್ಲಿ ನನ್ನ ಮುಖ ಅಲ್ಲ, ಮೋದಿ ಮುಖ ನೋಡಿ ಕ್ಷೇತ್ರದ ಜನರು ಮತಹಾಕಬೇಕು. ನಾವು ದೇಶದ, ಜಿಲ್ಲೆಯ ಅಭಿವೃದ್ಧಿ ವಿಷಯಗಳ ಮೇಲೆ ಮತ ಕೇಳುತ್ತೇವೆ. ದೇಶದಲ್ಲಿ ಬಿಜೆಪಿ 300 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮತದಾರರು ಈಗಾಗಲೇ ಬಿಜೆಪಿ ಪರ ಮತ ಹಾಕಲು ನಿರ್ಧರಿಸಿದ್ದಾರೆ. ಯಾರೇ ಬಿಜೆಪಿ ವಿರುದ್ಧ ಏನೇ ಮಾಡಿದರು ಅದು ಜನರ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ದೇಶದ ಅಭಿವೃದ್ಧಿಗೆ ಐಟಿ ದಾಳಿ ಅವಶ್ಯಕ: ರಾಜ್ಯದಲ್ಲಿ ಐಟಿ ದಾಳಿ ನಡೆಯುತ್ತಿರುವುದು ಒಳ್ಳೆಯ ಕೆಲಸ. ದೇಶದ ಅಭಿವೃದ್ಧಿಗೆ ಈ ರೀತಿಯ ದಾಳಿ ಅವಶ್ಯಕ. ಇವರೇಕೆ ಅಕ್ರಮ ದುಡ್ಡು ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳಬೇಕು. ಇಂಥ ದಾಳಿ ನಡೆದರೆ ತಪ್ಪೇನು. ಪ್ರಾಮಾಣಿಕವಾಗಿ ಹಣ ಗಳಿಸಿದ್ದರೆ ಹೆದರಿಕೆ ಯಾಕೆ ಎಂದು ಪ್ರಶ್ನಿಸಿದರು.
ದೇಶ ಅಭಿವೃದ್ಧಿಗೆ ಐಟಿ ದಾಳಿ ಅಗತ್ಯ. ದೇಶವನ್ನು ಲೂಟಿ ಮಾಡಿದವರ ವಿರುದ್ಧ ಐಟಿ ದಾಳಿ ತಪ್ಪಲ್ಲ. ನಾಯಕರು ಯಾಕೆ ಎಲ್ಲ ಹಣ ತಂದು ಇಟ್ಟುಕೊಳ್ಳಬೇಕು. ಅವರು ಸಾಮಾನ್ಯರಂತಿದ್ದರೆ ಯಾಕೆ ದಾಳಿ ಮಾಡುತ್ತಾರೆ. ಬಡವರ ಸಂಪತ್ತನ್ನು ಕೊಳ್ಳೆ ಹೊಡೆದವರ ಮೇಲೆ ಐಟಿ ದಾಳಿ ಮಾಡುವುದು ಅಗತ್ಯವಿದೆ ಎಂದರು.







