ಚುನಾವಣೆಗಾಗಿ ಮೀನುಗಾರರ ನಾಪತ್ತೆ ಮರೆಮಾಚುವ ಪ್ರಯತ್ನ: ಪ್ರಮೋದ್

ಬ್ರಹ್ಮಾವರ, ಮಾ.28: ಬೋಟು ಸಹಿತ ನಾಪತ್ತೆಯಾದ ಮೀನುಗಾರರನ್ನು ಹುಡುಕುವಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲವಾಗಿದ್ದು, ಚುನಾವಣೆಗಾಗಿ ಸತ್ಯ ಮರೆ ಮಾಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಬ್ರಹ್ಮಾವರದಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡು ತಿದ್ದರು. ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಕಳೆದಿವೆ. ಅವರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದೇ ತಿಳಿದಿಲ್ಲ. ಮೀನುಗಾರರಿಗೆ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರಕಾರ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ದೂರಿದರು.
ನಿರ್ಮಲಾ ಸೀತಾರಾಮನ್ ನಾಪತ್ತೆಯಾದ ಮೀನುಗಾರ ಕುಟುಂಬದವರ ಮನೆಗೆ ಭೇಟಿ ನೀಡಿ, ಅವರ ನೋವಿಗೆ ಸ್ಪಂದಿಸಿಲ್ಲ. ಆದರೆ ಶೋಭಾ ಕರಂದ್ಲಾಜೆ ಬೋಟು ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಏಳು ಮಂದಿ ಮೀನುಗಾರರು ನಾಪತ್ತೆಯಾಗಲು ನೌಕಾಪಡೆಯೇ ಕಾರಣ. ಮೀನುಗಾರರ ನಾಪತ್ತೆ ಪ್ರಕರಣದ ಹಿಂದೆ ನೌಕಾಪಡೆಯ ಕೈವಾಡವಿದೆ ಎಂದು ಅವರು ಆೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆ ಮಾಡಿದರೆ ಒಂದು ತಿಂಗಳ ಒಳಗೆ ಮರಳಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ರಘುಪತಿ ಭಟ್, 11 ತಿಂಗಳು ಕಳೆದರೂ ಕೂಡ ಮರಳಿನ ಸಮಸ್ಯೆ ಬಗೆ ಹರಿಸಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಎಸ್.ನಾರಾಯಣ್, ರಾಜೇಶ್ ಶೆಟ್ಟಿ ಕುಮ್ರಗೋಡು, ರಾಘವೇಂದ್ರ ಕುಂದರ್, ರಾಘವೇಂದ್ರ ಶೆಟ್ಟಿ ಕರ್ಜೆ, ರಹಮತುಲ್ಲಾ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







