ಬಿಬಿಎಂಪಿ ಆಯುಕ್ತರಿಂದ ಕೆಆರ್ ಮಾರುಕಟ್ಟೆಗೆ ದಿಢೀರ್ ಭೇಟಿ, ಪರಿಶೀಲನೆ
ಬೆಂಗಳೂರು, ಮಾ.28: ಕೆ.ಆರ್.ಮಾರುಕಟ್ಟೆ ಸೇರಿದಂತೆ ನಗರದಲ್ಲಿರುವ ಪಾಲಿಕೆಗೆ ಸೇರಿದ ಮಾರುಕಟ್ಟೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದಲ್ಲಿರುವ ಮಾರುಕಟ್ಟೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾತಿ ನೀಡಬೇಕೆಂದು ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಮಾರುಕಟ್ಟೆಯ ಆವರಣದಲ್ಲಿನ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿರುವುದನ್ನು ಕಂಡು ಸಿಟ್ಟಿಗೆದ್ದ ಆಯುಕ್ತರು, ನಾಳೆಯೊಳಗೆ ಪಾದಚಾರಿ ಮಾರ್ಗ ಮುಕ್ತವಾಗಿರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅನಧಿಕೃತವಾಗಿ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸಬಾರದು. ಇದರಿಂದ ಗ್ರಾಹಕರಿಗೆ ತೊಂದರೆಯಾಗಲಿದೆ. ಹಾಗಾಗಿ, ವ್ಯಾಪಾರಸ್ಥರನ್ನು ತೆರವುಗೊಳಿಸದಿದ್ದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅನಧಿಕೃತವಾಗಿ ಒತ್ತುವರಿಯಾಗಿರುವ ಪ್ರದೇಶಗಳು ಸಂಜೆಯೊಳಗೆ ಮುಕ್ತಗೊಳ್ಳದಿದ್ದಲ್ಲಿ ನಾಳೆಯಿಂದಲೇ ಆಂದೋಲನದ ರೀತಿ ತೆರವುಗೊಳಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು. ಕಟ್ಟಡದ ಸುರಕ್ಷತೆ ಬಗ್ಗೆಯೂ ಹೆಚ್ಚು ಗಮನ ಹರಿಸಲಾಗುವುದು. ಸುರಕ್ಷತಾ ದೃಷ್ಟಿಯಿಂದ ಕಟ್ಟಡಗಳಲ್ಲಿ ಎಲ್ಲ ಮಾನದಂಡಗಳನ್ನು ಅನುಸರಿಸಲಾಗುವುದು ಎಂದು ಅವರು ತಿಳಿಸಿದರು.







