ಪ್ರಣೀತ್, ಕಶ್ಯಪ್ ಕ್ವಾರ್ಟರ್‌ಫೈನಲ್‌ಗೆ
ಇಂಡಿಯಾ ಓಪನ್ ಬ್ಯಾಡ್ಮಿಂಟನ್


ಹೊಸದಿಲ್ಲಿ, ಮಾ.28: ಭಾರತದ ಬಿ. ಸಾಯಿ ಪ್ರಣೀತ್ ಹಾಗೂ ಪರುಪಳ್ಳಿ ಕಶ್ಯಪ್ ಗುರುವಾರ ಪುರುಷರ ಸಿಂಗಲ್ಸ್ ನ ತಮ್ಮ ಪಂದ್ಯಗಳಲ್ಲಿ ಜಯಿಸಿ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸ್ವಿಸ್ ಓಪನ್‌ನ ಫೈನಲ್ ತಲುಪಿದ್ದ ಪ್ರಣೀತ್, ರೋಚಕ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದವರೇ ಆದ ಸಮೀರ್ ವರ್ಮಾರನ್ನು 18-21, 21-16, 21-15 ಗೇಮ್‌ಗಳಿಂದ ಮಣಿಸಿದರು. ಇನ್ನು 2014ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಥಾಯ್ಲೆಂಡ್‌ನ ತಾನೊಂಗ್ಸಾಕ್ ಸಾನ್ ಸೋಂಬುನ್ಸುಕ್ ಅವರನ್ನು 21-11, 21-13 ನೇರ ಗೇಮ್‌ಗಳಿಂದ ಮಣಿಸಿ ಕ್ವಾರ್ಟರ್‌ಗೆ ರಹದಾರಿ ಪಡೆದರು.
ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ರಿಯಾ ಮುಖರ್ಜಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ವಿರುದ್ಧ ಸಾಹಸದ ಪ್ರದರ್ಶನ ತೋರಿದರೂ 8-21, 21-17, 13-21ರಿಂದ ಸೋಲು ಅನುಭವಿಸಬೇಕಾಯಿತು.
ಗೋಪಿಚಂದ್ ಅಕಾಡಮಿಯ ಸಹವರ್ತಿಗಳಾದ ಪ್ರಣೀತ್ ಹಾಗೂ ಸಮೀರ್ ಪರಸ್ಪರರ ವಿರುದ್ಧ 5 ಪಂದ್ಯಗಳನ್ನು ಆಡಿದ್ದು ಪ್ರಣೀತ್ 3-2 ಅಂತರದ ಹೆಡ್ ಟು ಹೆಡ್ ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಸ್ಥಳೀಯ ಟೂರ್ನಿಗಳಲ್ಲಿ ಸಮೀರ್ ವರ್ಮಾ ಹಲವು ಬಾರಿ ಪ್ರಣೀತ್‌ಗೆ ಸೋಲುಣಿಸಿದ್ದಾರೆ.
►ಸೋಲು-ಗೆಲುವಿನಲ್ಲಿ ಭಾರತದ ಜೋಡಿ
ಮಹಿಳಾ ಡಬಲ್ಸ್‌ನಲ್ಲಿ ಭಾರತ ಅಪರ್ಣಾ ಬಾಲನ್- ಶ್ರುತಿ ಕೆ.ಪಿ. ಜೋಡಿಯು ಹಾಂಕಾಂಗ್‌ನ ಜೋಡಿ ವಿಂಗ್ ಯುಂಗ್-ಯೂಂಗ್ ಗಾ ಟಿಂಗ್ ಜೋಡಿಯನ್ನು 21-19, 7-21ರಿಂದ ಸದೆಬಡಿದರೆ, ಪುರುಷರ ಡಬಲ್ಸ್ ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ - ಶಿವಂ ಶರ್ಮಾ ಜೋಡಿಯು ಭಾರತದವರೇ ಆದ ಅನಿರುದ್ಧ ಮಯೆಕರ್-ವಿನಯಕುಮಾರ್ ಸಿಂಗ್ ಜೋಡಿಯನ್ನು 21-15, 21-11 ನೇರ ಗೇಮ್‌ಗಳಿಂದ ಮಣಿಸಿತು.







