ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ
ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್

ಹೊಸದಿಲ್ಲಿ, ಮಾ.28: ಚೈನೀಸ್ ತೈಪೆಯಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಏಶ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ 2ನೇ ದಿನವಾದ ಗುರುವಾರ ಭಾರತದ ಶೂಟರ್‌ಗಳು ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ರವಿ ಕುಮಾರ್ ಹಾಗೂ ಇಲವೆನಿಲ್ ವಲಾರಿವನ್ ಹಿರಿಯರ 10 ಮೀ. ಏರ್ ರೈಫಲ್ ಮಿಶ್ರ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ರವಿ ಹಾಗೂ ವಲಾರಿವನ್ 837.1 ಅಂಕ ಗಳಿಸಿ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದಿದ್ದರು. ಆದರೆ, ಐದು ತಂಡಗಳು ಸ್ಪರ್ಧಿಸಿದ್ದ ಫೈನಲ್‌ನಲ್ಲಿ ಕೊರಿಯಾದ ಜೋಡಿ ಪಾರ್ಕ್ ಸನ್‌ಮಿನ್ ಹಾಗೂ ಶಿನ್ ಮಿಂಕಿ ಅವರನ್ನು ಸೋಲಿಸಿದ್ದಾರೆ.
ಕೊರಿಯಾ ಜೋಡಿ 499.6 ಅಂಕ ಗಳಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಭಾರತದ ಜೋಡಿ 498.4 ಅಂಕ ಗಳಿಸಿ ಬೆಳ್ಳಿ ಪದಕವನ್ನು ಜಯಿಸಿದರೆ, ಚೈನೀಸ್ ತೈಪೆ ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಸ್ಪರ್ಧೆಯಲ್ಲಿದ್ದ ಭಾರತದ ದೀಪಕ್ ಕುಮಾರ್ ಹಾಗೂ ಅಪೂರ್ವಿ ಚಾಂಡೇಲ ನಾಲ್ಕನೇ ಸ್ಥಾನ ಪಡೆದರು. ಜೂನಿಯರ್ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಭಾರತದ ಎರಡು ತಂಡಗಳು ಫೈನಲ್‌ಗೆ ತಲುಪಿದ್ದವು. ಮೆಹುಲಿ ಘೋಷ್ ಹಾಗೂ ಕೆವಾಲ್ ಪ್ರಜಾಪತಿ ಅರ್ಹತಾ ಸುತ್ತಿನಲ್ಲಿ 838.5 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಶ್ರೇಯಾ ಅಗರ್ವಾಲ್ ಹಾಗೂ ಯಶ್ ವರ್ಧನ್ 831.2 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶ್ರೇಯಾ ಹಾಗೂ ಯಶ್ ಫೈನಲ್‌ನಲ್ಲಿ ಮೆಹುಲಿ-ಪ್ರಜಾಪತಿ ಜೋಡಿಯನ್ನು ಎದುರಿಸಿ 0.4 ಅಂಕದಿಂದ ಜಯ ಸಾಧಿಸಿದರು. ಶ್ರೇಯಾ-ಯಶ್ 497.3 ಅಂಕ ಗಳಿಸಿದರೆ, ಮೆಹುಲಿ-ಪ್ರಜಾಪತಿ 496.9 ಅಂಕ ಗಳಿಸಿದರು. ಕೊರಿಯಾ ತಂಡ ಕಂಚಿನ ಪದಕ ಜಯಿಸಿತು.
ಸ್ಪರ್ಧೆಯ ಮೊದಲ ದಿನವಾದ ಬುಧವಾರ ಸೌರಭ್ ಚೌಧರಿ ಹಾಗೂ ಮನು ಭಾಕರ್ ಹಿರಿಯರ 10 ಮೀ.ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಜೂನಿಯರ್ ಸ್ಪರ್ಧೆಯಲ್ಲಿ ವಿಜಯವೀರ್ ಸಿಧು ಹಾಗೂ ಇಶಾ ಸಿಂಗ್ ಕೂಡ ಸ್ವರ್ಣ ಜಯಿಸಿದರು. ಈ ಮೂಲಕ ಭಾರತಕ್ಕೆ ಎರಡು ಚಿನ್ನ ಗೆದ್ದುಕೊಟ್ಟರು.
ಇದೀಗ ಒಟ್ಟು 5 ಪದಕ ಬಾಚಿಕೊಂಡಿರುವ ಭಾರತ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.







