ಪೋಲೆಂಡ್ ವಿರುದ್ಧ ಪಾರಮ್ಯ ಮೆರೆಯುವುದೇ ಭಾರತ?
ಅಝ್ಲಾನ್ ಶಾ ಕಪ್ ಹಾಕಿ

ಇಪೊ (ಮಲೇಶ್ಯ), ಮಾ.28: ಈಗಾಗಲೇ ಟೂರ್ನಿಯ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಹಾಕಿ ತಂಡ, ಅಝ್ಲಾನ್ ಹಾಕಿ ಕಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶುಕ್ರವಾರ ತನಗಿಂತ ಕೆಳ ರ್ಯಾಂಕಿನ ಪೋಲೆಂಡ್ ವಿರುದ್ಧ ಪಾರಮ್ಯ ಮೆರೆಯಲು ಸಜ್ಜಾಗಿದೆ.
ಮೂರು ಗೆಲುವು ಹಾಗೂ ಒಂದು ಪಂದ್ಯದ ಡ್ರಾನೊಂದಿಗೆ 6 ತಂಡಗಳ ಅಂಕಪಟ್ಟಿಯಲ್ಲಿ ಭಾರತ 10 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. 5 ಬಾರಿಯ ಚಾಂಪಿಯನ್ ಭಾರತದಂತೆ ಕೊರಿಯ ಕೂಡ ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಸ್ಥಾನ ಖಚಿತಪಡಿಸಿಕೊಂಡಿದೆ. ಕೊರಿಯ 10 ಅಂಕಗಳನ್ನು ಹೊಂದಿದ್ದರೂ ಭಾರತಕ್ಕಿಂತ 5 ಗೋಲುಗಳನ್ನು ಕಡಿಮೆ ಬಾರಿಸಿದೆ.
ಲೀಗ್‌ನ ಕೊನೆಯ ಪಂದ್ಯ ಎಲ್ಲ ತಂಡಗಳಿಗೂ ಕೇವಲ ಔಪಚಾರಿಕವಾಗಿದ್ದರೂ ಕೊರಿಯ ಹಾಗೂ ಭಾರತ ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರಿಸುವ ಹಂತದಲ್ಲಿವೆ. ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತಕ್ಕೆ 21ನೇ ಸ್ಥಾನದಲ್ಲಿರುವ ಪೋಲೆಂಡ್ ಸುಲಭ ತುತ್ತಾಗುವುದನ್ನು ನಿರೀಕ್ಷಿಸಲಾಗಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಕೊರಿಯ ವಿರುದ್ಧ ಡ್ರಾ ಸಾಧಿಸಿದ್ದನ್ನು ಬಿಟ್ಟರೆ ಬಂಪರ್ ಬೆಳೆಯನ್ನೇ ತೆಗೆದಿದೆ. ಪ್ರಥಮ ಪಂದ್ಯದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 2-0ಯಿಂದ ಬಗ್ಗುಬಡಿದಿದ್ದ ಭಾರತ ತಂಡ ಮಲೇಶ್ಯ ವಿರುದ್ಧ 4-2 ಹಾಗೂ ಕೆನಡಾ ವಿರುದ್ಧ ಭರ್ಜರಿ 7-3ರಿಂದ ಜಯ ಸಾಧಿಸಿದೆ. ಕೊರಿಯ ವಿರುದ್ಧದ ಫೈನಲ್‌ಗೂ ಮುನ್ನ ಶುಕ್ರವಾರ ಪೋಲೆಂಡ್ ವಿರುದ್ಧ ತನ್ನ ಆಕ್ರಮಣಕಾರಿ ಸಂಯೋಜನೆಯನ್ನು ಬಲಿಷ್ಠಗೊಳಿಸುವತ್ತ ಮಂದೀಪ್ ಪಡೆ ಗಮನಹರಿಸಬೇಕಿದೆ. ಕೆನಡಾ ವಿರುದ್ಧದ ಪಂದ್ಯದಲ್ಲಿ ಮಂದೀಪ್ ಸಿಂಗ್ ಹ್ಯಾಟ್ರಿಕ್ ಗೋಲು ಬಾರಿಸಿ ಗಮನಸೆಳೆದಿದ್ದು, ಅವರಿಗೆ ಇನ್ನುಳಿದ ಸ್ಟ್ರೈಕರ್‌ಗಳು ಬೆಂಬಲ ನೀಡಬೇಕಿದೆ. ಮಂದೀಪ್ ಹೊರತುಪಡಿಸಿ ವರುಣ್‌ಕುಮಾರ್ ಕೂಡ ಉತ್ತಮ ಪ್ರದರ್ಶನದಿಂದ ಮಿಂಚಿದ್ದಾರೆ. ಟೂರ್ನಿಯಲ್ಲಿ ಪೋಲೆಂಡ್ ತಾನಾಡಿದ ಎಲ್ಲ ಪಂದ್ಯಗಳನ್ನು ಹೀನಾಯವಾಗಿ ಸೋತಿದೆ. ಮಲೇಶ್ಯ ವಿರುದ್ಧ 1-5, ಕೆನಡಾ ವಿರುದ್ಧ 0-4, ಜಪಾನ್ ವಿರುದ್ಧ 0-3 ಅಂತರದಿಂದ ಸೋತಿರುವ ಅದು, ಕೊರಿಯ ವಿರುದ್ಧ ಮಾತ್ರ 2-3ರಿಂದ ಪೈಪೋಟಿ ನೀಡಿತ್ತು. ಶುಕ್ರವಾರದ ಇನ್ನುಳಿದ ಪಂದ್ಯಗಳಲ್ಲಿ ಕೊರಿಯ ತಂಡ ಜಪಾನ್‌ನ್ನು ಎದುರಿಸಿದರೆ, ಮಲೇಶ್ಯ ತಂಡ ಕೆನಡಾ ವಿರುದ್ಧ ಪಂದ್ಯದ ಮೂಲಕ ತನ್ನ ಲೀಗ್ ಅಭಿಯಾನ ಕೊನೆಗೊಳಿಸಲಿದೆ.







