ಜೆಸಿಬಿ ಸಾಹಿತ್ಯ ಪ್ರಶಸ್ತಿ ತೀರ್ಪುಗಾರರ ಸಮಿತಿ ಸದಸ್ಯನಾಗಿ ಅರವಿಂದ್ ಸುಬ್ರಮಣಿಯನ್

ಹೊಸದಿಲ್ಲಿ, ಮಾ.28: ಭಾರತದ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಶಸ್ತಿ ಎನಿಸಿರುವ , 25 ಲಕ್ಷ ರೂ. ಪ್ರಶಸ್ತಿ ಮೊತ್ತ ಒಳಗೊಂಡಿರುವ ಜೆಸಿಬಿ ಸಾಹಿತ್ಯ ಪ್ರಶಸ್ತಿಯ ತೀರ್ಪುಗಾರರ ಸಮಿತಿಯ ಸದಸ್ಯನಾಗಿ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ನೇಮಕವಾಗಿದ್ದಾರೆ.
ಖ್ಯಾತ ಪರಿಸರವಾದಿ ಹಾಗೂ ಸಿನೆಮ ನಿರ್ಮಾಪಕ ಪ್ರದೀಪ್ ಕೃಷ್ಣನ್ ನೇತೃತ್ವದ ಸಮಿತಿಯಲ್ಲಿ ಸುಬ್ರಮಣಿಯನ್ ಜೊತೆಗೆ ಲೇಖಕರಾದ ಕೆಆರ್ ಮೀರಾ ಮತ್ತು ಪಾರ್ವತಿ ಶರ್ಮ, ಸಾಹಿತ್ಯ ವಿಮರ್ಶಕಿ ಹಾಗೂ ಲೇಖಕಿ ಅಂಜುಮ್ ಹಸನ್ ಸೇರಿದ್ದಾರೆ.
ಈ ವರ್ಷದ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಎಪ್ರಿಲ್ 30 ಅಂತಿಮ ದಿನವಾಗಿದ್ದು, ಅಂತಿಮ 10 ಹೆಸರನ್ನು ಸೆಪ್ಟೆಂಬರ್ 4ರಂದು, ಇದರಲ್ಲಿ ಐದು ಹೆಸರನ್ನು ಅಕ್ಟೋಬರ್ 4ರಂದು ಹಾಗೂ ಅಂತಿಮ ವಿಜೇತರನ್ನು ನವೆಂಬರ್ 2ರಂದು ಘೋಷಿಸಲಾಗುವುದು. ಪ್ರಶಸ್ತಿ 25 ಲಕ್ಷ ರೂ. ನಗದು ಬಹುಮಾನ ಹೊಂದಿದೆ. ಅನುವಾದ ಕೃತಿ ಪ್ರಶಸ್ತಿಗೆ ಆಯ್ಕೆಯಾದರೆ ಆಗ ಅನುವಾದಕರಿಗೂ 10 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
ನಿರ್ಮಾಣ ಸಾಮಾಗ್ರಿ ಉತ್ಪಾದನಾ ಸಂಸ್ಥೆ ‘ಜೆಸಿಬಿ’ 2018ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಮೊದಲ ವರ್ಷ (2018ರಲ್ಲಿ) ಮಲಯಾಳಂ ಸಾಹಿತಿ ಬೆನ್ಯಾಮಿನ್ ಅವರ ಕಾದಂಬರಿ ‘ಜಾಸ್ಮಿನ್ ಡೇಸ್’ಗೆ ನೀಡಲಾಗಿದೆ.







