ಶಿವೇಂದ್ರ ಸಿಂಗ್ ಹಾಕಿ ಸಹಾಯಕ ಕೋಚ್ ಸಾಧ್ಯತೆ
ಹೊಸದಿಲ್ಲಿ, ಮಾ.28: ಭಾರತ ಹಾಕಿ ತಂಡದ ಮಾಜಿ ಮುನ್ಪಡೆ ಆಟಗಾರ ಶಿವೇಂದ್ರ ಸಿಂಗ್ ರಾಷ್ಟ್ರೀಯ ಹಾಕಿ ತಂಡದ ಸಹಾಯಕ ಕೋಚ್ ಆಗುವ ಸಾಧ್ಯತೆಯಿದ್ದು, ಮುಂದಿನ ತಿಂಗಳಿನಿಂದ ಅವರು ತಂಡದೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ತಂಡಕ್ಕೆ ಆಡುವ ದಿನಗಳಲ್ಲಿ ಚುರುಕಿನ ವ್ಯಕ್ತಿಯಾಗಿದ್ದ ಶಿವೇಂದ್ರ, ಸದ್ಯ ಹಾಲಿ ಆಟಗಾರರೊಂದಿಗೆ ಕೆಲಸ ಮಾಡಲಿದ್ದಾರೆ. ಆಸ್ಟ್ರೇಲಿಯದ ಗ್ರಹಾಂ ರೇಡ್ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯಿರುವ ಕೋಚಿಂಗ್ ಸಿಬ್ಬಂದಿಯೊಂದಿಗೆ ಕೆಲಸ ಮಾಡಲಿದ್ದಾರೆ.
ಈ ವಾರದ ಆರಂಭದಲ್ಲಿ ಮುಖ್ಯ ಕೋಚ್ ಹುದ್ದೆಗೆ ರೇಡ್ ಹೆಸರನ್ನು ಹಾಕಿ ಇಂಡಿಯಾ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿವೆ. ಶಿವೇಂದ್ರರನ್ನು ಹೊರತುಪಡಿಸಿ ಸದ್ಯ ತಂಡದ ಅನಾಲಿಟಿಕಲ್ ಕೋಚ್ ಆಗಿರುವ ಆಸ್ಟ್ರೇಲಿಯದ ಮಾಜಿ ಡ್ರಾಗ್-ಫ್ಲಿಕರ್ ಕ್ರಿಸ್ ಸಿರೆಲ್ಲೊ ಕೂಡ ಸಹಾಯಕ ಕೋಚ್ ಆಗುವ ಸಾಧ್ಯತೆಯಿದೆ.
2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಪದಕ ಗೆದ್ದಾಗ ಶಿವೇಂದ್ರ ತಂಡದಲ್ಲಿದ್ದರು. 2010ರ ಗುವಾಂಗ್‌ಝೌ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.





