ಹಂದಿ ಮಾಂಸ ಸೇವನೆ: ಯುವಕನ ಸಾವು

ಹೊಸದಿಲ್ಲಿ, ಮಾ. 29: ಅರೆಬೆಂದ ಹಂದಿ ಮಾಂಸ ಸೇವನೆಯಿಂದ ಯುವಕನೋರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಹಂದಿಮಾಂಸವನ್ನು ಸರಿಯಾಗಿ ಬೇಯಿಸದಿದ್ದುದರಿಂದ ಅದರಲ್ಲಿದ್ದ ಹುಳಗಳು ಯುವಕನ ಮೆದುಳು ಸೇರಿ ಮೊಟ್ಟೆಯಿಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದು, ಯುವಕನ ಹೆಸರನ್ನು ಪ್ರಕಟಿಸಿಲ್ಲ.
ಒಂದು ವಾರದಿಂದೀಚೆಗೆ ಮೆದುಳಿನ ಎಡಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ಯುವಕ ಸಮೀಪದ ಮೆಡಿಕಲ್ ಕಾಲೇಜ್‌ನಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ವೇಳೆ ಮೆದುಳಿನ ಸ್ಕಾನಿಂಗ್ ನಡೆಸಲಾಗಿದ್ದು, ಯುವಕನ ಪ್ರಜ್ಞೆ ತಪ್ಪಿದೆ.
ಸ್ಕಾನ್ ರಿಪೋರ್ಟ್ ಪರಿಶೀಲಿಸಿದಾಗ ಮೆದುಳಿಗೆ ಸೇರುವ ನರಗಳಲ್ಲಿ ಹುಳಗಳು ನೂರರಷ್ಟು ಮೊಟ್ಟೆಯಿಟ್ಟದ್ದು ಕಂಡುಬಂದಿವೆ. ಮೆದುಳಿನ ಕೋಶಗಳನ್ನು ಹುಳಗಳು ತಿನ್ನಲು ಆರಂಭಿಸಿದ್ದರಿಂದ ಯುವಕನಿಗೆ ತೀವ್ರ ನೋವು ಕಾಣಿಸಿಕೊಂಡಿತ್ತು. ಯುವಕನ ಎಡಕಣ್ಣಿಗೂ ಹುಳಗಳು ವ್ಯಾಪಿಸಿದ್ದರಿಂದಾಗಿ ಕಣ್ಣು ಕೆಂಪು ವರ್ಣಕ್ಕೆ ತಿರುಗಿತ್ತು.ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಲು ವೈದ್ಯರು ಗರಿಷ್ಠ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ವಾರಗಳ ಹಿಂದೆ ಯುವಕ ಹಂದಿ ಮಾಂಸ ಸೇವಿಸಿದ್ದ ಬಗ್ಗೆ ಆತನ ಹೆತ್ತವರು ವೈದ್ಯರಿಗೆ ತಿಳಿಸಿದ್ದರು.
ಹಂದಿ ಮಾಂಸ ಸೇವನೆಯಿಂದ 2017ರಲ್ಲಿ ನ್ಯೂಝಿಲೆಂಡ್‌ನಲ್ಲಿದ್ದ ಮಲಯಾಳಿ ಕುಟುಂಬವೊಂದು ಕೋಮಾ ಸ್ಥಿತಿಗೆ ತಲುಪಿದ್ದು ಸುದ್ದಿಯಾಗಿತ್ತು.







