'ಡಿ.ಆರ್.ಡಿ.ಒ ಮಾಜಿ ಮುಖ್ಯಸ್ಥರು ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆಗೆ ಅನುಮತಿ ಕೇಳಿರಲಿಲ್ಲ'
ಮಾಜಿ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್

ಶಿವಶಂಕರ್ ಮೆನನ್
ಹೊಸದಿಲ್ಲಿ : ಡಿಫೆನ್ಸ್ ಆ್ಯಂಡ್ ರಿಸರ್ಚ್ ಡೆವಲೆಪ್ಮೆಂಟ್ ಆರ್ಗನೈಝೇಶನ್ ಗೆ (ಡಿ.ಆರ್.ಡಿ.ಒ) ಹಿಂದಿನ ಮನಮೋಹನ್ ಸಿಂಗ್ ಸರಕಾರ ಉಪಗ್ರಹ ನಾಶಕ ಕ್ಷಿಪಣಿ ಸಾಮರ್ಥ್ಯ ಪರೀಕ್ಷೆಗೆ ಅನುಮತಿಸಿರಲಿಲ್ಲ ಎಂಬ ವರದಿಗಳನ್ನು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅಲ್ಲಗಳೆದಿದ್ದಾರೆ.
ಭಾರತವು ಮಿಷನ್ ಶಕ್ತಿ-ಉಪಗ್ರಹ ನಾಶಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಿಗೇ ಪ್ರತಿಕ್ರಿಯಿಸಿದ್ದ ಡಿ.ಆರ್.ಡಿ.ಒ ಮಾಜಿ ಮುಖ್ಯಸ್ಥ ವಿಕೆ ಸಾರಸ್ವತ್ ಹಿಂದಿನ ಸರಕಾರ ಇಂತಹ ಪರೀಕ್ಷೆಗೆ ಅನುಮತಿಸಿರಲಿಲ್ಲ ಎಂಬ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಶಿವಶಂಕರ್ ಮೆನನ್ ಅವರ ಮಾತು ಮಹತ್ವ ಪಡೆದಿದೆ.
ಮೋದಿ ಸರಕಾರದ ನೀತಿ ಆಯೋಗದ ಸದಸ್ಯರಾಗಿರುವ ಸಾರಸ್ವತ್ ಅವರು ಡಿ.ಆರ್.ಡಿ.ಒ ಮುಖ್ಯಸ್ಥರಾಗಿ 2013ರಲ್ಲಿ ನಿವೃತ್ತರಾಗಿದ್ದರು. ತಾವು ಈ ಹಿಂದಿನ ಸರಕಾರಕ್ಕೆ ಇಂತಹ ಪರೀಕ್ಷೆಯ ಬಗ್ಗೆ ಹೇಳಿದ್ದರೂ ಅದಕ್ಕೆ ರಾಜಕೀಯ ಮನೋಬಲದ ಕೊರತೆಯಿತ್ತು. ಯಾವುದೇ ಕಾರಣ ನೀಡಲಾಗಿರಲಿಲ್ಲ, ಸರಕಾರ ಮೌನವಾಗಿತ್ತು'' ಎಂದು ಅವರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆನನ್, ''ಸಾರಸ್ವತ್ ಅವರು ಹಿಂದಿನ ಸರಕಾರದ ಮುಂದೆ ಉಪಗ್ರಹ ನಾಶಕ ಕ್ಷಿಪಣಿ ಕುರಿತಂತೆ ವರದಿ ಮಂಡನೆ ಮಾಡಿದ್ದರೂ ಇಂತಹ ಪರೀಕ್ಷೆಗೆ ಅನುಮತಿ ಕೇಳಿರಲಾಗಿರಲಿಲ್ಲ'' ಎಂದಿದ್ದಾರೆ.
ವಿಪರ್ಯಾಸವೆಂದರೆ 2012ರಲ್ಲಿ ಇಂಡಿಯಾ ಟುಡೇಗೆ ನೀಡಿದ್ದ ಸಂದರ್ಶನದಲ್ಲಿ ಭಾರತದ ಉಪಗ್ರಹ ನಾಶಕ ಕ್ಷಿಪಣಿ ಸಾಮರ್ಥ್ಯ ಪರೀಕ್ಷೆಯ ಪರ ತಾವೇಕೆ ಇರಲಿಲ್ಲ ಎಂದು ಸಾರಸ್ವತ್ ವಿವರಿಸಿದ್ದರು.







