ಹಾಲಿ-ಮಾಜಿ ಸಿಎಂಗಳನ್ನು ಎರೆಹುಳುವಿಗೆ ಹೋಲಿಸಿದ ಶಿಕ್ಷಕ ಅಮಾನತು !

ಬೆಂಗಳೂರು, ಮಾ.29: ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆಯ ತೃತೀಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರನ್ನು ಎರೆಹುಳುವಿಗೆ ಹೋಲಿಕೆ ಮಾಡಿದ್ದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಪ್ರೌಢಶಾಲೆಯ ಶಿಕ್ಷಕರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.
ರೈತನ ಮಿತ್ರನಾರು? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಅಥವಾ ಯಡಿಯೂರಪ್ಪ ಅಥವಾ ಎರೆಹುಳು ಎಂಬ ಉತ್ತರವನ್ನು ನೀಡಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ 2019 ನೆ ಸಾಲಿನ ಪ್ರಶ್ನೆಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು.
ಪರೀಕ್ಷೆಯಲ್ಲಿ ಇಂತಹ ಅಸಂಬದ್ಧವಾದ ಪ್ರಶ್ನೆ ಕೇಳಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ರೈತನ ಮಿತ್ರನಾಗಿ ಸಿಎಂ ಹಾಗೂ ಮಾಜಿ ಸಿಎಂ ಅವರನ್ನು ಉತ್ತರದ ಆಯ್ಕೆಗೆ ಅವಕಾಶ ಕಲ್ಪಿಸಿರುವುದು, ಪ್ರಭಾವಿಗಳ ಓಲೈಕೆಗೋ ಅಥವಾ ಮಕ್ಕಳ ಜ್ಞಾನವನ್ನು ಪರೀಕ್ಷಿಸಲೋ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಈ ಪ್ರಶ್ನೆಯನ್ನು ಪ್ರಶ್ನೆಪತ್ರಿಕೆಯಲ್ಲಿ ಸೇರ್ಪಡೆಗೊಳಿಸುವ ಮೊದಲು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿರಲಿಲ್ಲ ಎಂದು ಶಾಲೆಯ ಪ್ರಾಚಾರ್ಯರಾದ ರಾಘವೇಂದ್ರ ಹೇಳಿದ್ದಾರೆ. ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳುವುದರ ಹಿಂದೆ ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರಚುರ ಪಡಿಸುವ ಉದ್ದೇಶವಿರಲಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.







