ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡ-ಕೆ.ಎನ್.ರಾಜಣ್ಣ ನಾಮಪತ್ರ ವಾಪಸ್

ಕೆ.ಎನ್.ರಾಜಣ್ಣ- ಮುದ್ದಹನುಮೇಗೌಡ
ಬೆಂಗಳೂರು, ಮಾ. 29: ದೇಶದ ಗಮನ ಸೆಳೆದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಾಜಿ ಪ್ರಧಾನಿ(ಮೈತ್ರಿ ಅಭ್ಯರ್ಥಿ) ದೇವೇಗೌಡ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೊನೆಗೂ ನಾಮಪತ್ರ ಹಿಂಪಡೆದಿದ್ದಾರೆ.
ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಆಗಮಿಸಿರಲಿಲ್ಲ. ಆದರೆ, ಅವರ ಪರವಾಗಿ ಅವರ ಬೆಂಬಲಿಗ ರಾಯಸಂದ್ರ ರವಿಕುಮಾರ್, ಮುದ್ದಹನುಮೇಗೌಡರ ನಾಮಪತ್ರ ಹಿಂದಕ್ಕೆ ಪಡೆಯುವ ಹಕ್ಕುಪತ್ರ ಸಲ್ಲಿಸಿ ಉಮೇದುವಾರಿಗೆ ವಾಪಸ್ ಪಡೆದರು.
ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈತ್ರಿ ಪಕ್ಷದ ವಿರುದ್ಧವಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಅವರ ನಿವಾಸಕ್ಕೆ ತೆರಳಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವೊಲಿಕೆಗೆ ಪ್ರಯತ್ನ ನಡೆಸಿದ್ದು, ಅಂತಿಮವಾಗಿ ಅವರು ನಾಮಪತ್ರ ಹಿಂಪಡೆದಿದ್ದಾರೆ.
‘ದೇಶದಲ್ಲಿ ಬಿಜೆಪಿಯನ್ನು ಸೋಲಿಸಬೇಕಿದ್ದರೆ ಮೈತ್ರಿ ಅನಿವಾರ್ಯ. ವರಿಷ್ಠರ ನಿರ್ಧಾರದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುದ್ದಹನುಮೇಗೌಡ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದು, ಜನರ ಪ್ರೀತಿ ಸಂಪಾದಿಸಿದ್ದಾರೆ. ಈ ಬಾರಿ ಅವರು ನಿಂತಿದ್ದರೆ ಖಂಡಿತ ಗೆಲ್ಲುವ ವಿಶ್ವಾಸವಿತ್ತು. ಆದರೆ, ಹೈಕಮಾಂಡ್ನ ನಿರ್ಧಾರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಹೀಗಾಗಿ ನಾನು ಹಾಗೂ ದಿನೇಶ್ ಗುಂಡೂರಾವ್ ಅವರ ಮನವೊಲಿಕೆಗೆ ಪ್ರಯತ್ನ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಸ್ಪಂದಿಸಿ ನಾಮಪತ್ರ ಹಿಂಪಡೆದಿದ್ದಾರೆ’ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.
‘ಮುದ್ದಹನುಮೇಗೌಡರ ರಾಜಕೀಯ ಭವಿಷ್ಯಕ್ಕೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತಿಗೆ ಗೌರವ ನೀಡಿ ನಾಮಪತ್ರ ಹಿಂಪಡೆದಿದ್ದಾರೆ ಎಂದು ತಿಳಿಸಿದರು.
‘ನಾನು ಸಂಸದ ಮುದ್ದಹುಮೇಗೌಡರ ಪರವಾಗಿದ್ದವನು. ಅವರು ನಾಮಪತ್ರ ಹಿಂಪಡೆದಿದ್ದು, ನಾನೂ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದೇನೆ. ಹೈಕಮಾಂಡ್ ಮನವೊಲಿಕೆ ವೇಳೆ ಗೌರವಯುತ ಹುದ್ದೆ ನೀಡುವ ಭರವಸೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಯಾವುದೇ ಬೇಡಿಕೆಯನ್ನಿಟ್ಟಿಲ್ಲ’
-ಕೆ.ಎನ್.ರಾಜಣ್ಣ ಮಾಜಿ ಶಾಸಕ







