ಐಟಿ ದಾಳಿ ಚುನಾವಣಾ ಸಮಯದಲ್ಲೇ ಏಕೆ ಆಗಬೇಕು:? ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು,ಮಾ.29: ಆದಾಯ ತೆರಿಗೆ ಇಲಾಖೆ ದಾಳಿಗೆ ನಮ್ಮ ವಿರೋಧ ಇಲ್ಲ, ಆದರೆ ಚುನಾವಣೆ ಸಮಯದಲ್ಲೇ ಏಕೆ ಮಾಡಬೇಕು? ಕಳೆದ ತಿಂಗಳು ಮಾಡಬಹುದಿತ್ತು, ಇಲ್ಲ ಮುಂದಿನ ತಿಂಗಳು ಮಾಡಬಹುದಿತ್ತಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಪರ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಐಟಿ ರೇಡ್ ಗೆ ನಮ್ಮ ವಿರೋಧ ಇಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಯಾಕೆ ಎಂದು ನಮ್ಮ ಪ್ರಶ್ನೆ? ಬಿಜೆಪಿಯವರ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ? ಅವರ ಬಳಿ ದುಡ್ಡಿಲ್ಲವಾ? ಯಡಿಯೂರಪ್ಪ 25 ಕೋಟಿ ಶಾಸಕರಿಗೆ ಆಫರ್ ಇಟ್ಟಿರಲಿಲ್ವಾ? ಈಶ್ವರಪ್ಪ ಬಳಿ ನೋಟು ಎಣಿಸುವ ಮಿಷಿನ್ ಸಿಕ್ಕಿರಲಿಲ್ವಾ? ಅವರ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ. ಇಂತಹ ದಾಳಿಗಳಿಂದ ನಮಗೆ ಬೆಂಬಲಿಸುವವರು, ಸಹಾಯ ಮಾಡುವವರು ಹಿಂದೆ ಹೋಗುತ್ತಾರೆ. ಕಾರ್ಯಕರ್ತರು, ಮುಖಂಡರು ಭಯದಿಂದ ಚುನಾವಣೆ ಹಿಂದೆ ಸರಿಯುತ್ತಾರೆ. ಹೀಗಾಗಿ ಇಂತಹ ದಾಳಿಗಳು ನಮಗೆ ಸ್ವಲ್ಪ ಪರಿಣಾಮ ಬಿರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಮೋದಿಯವರು ಇದನ್ನು ಪಾಲಿಸಬೇಕು ಎಂದರು.
ಇಂಟರ್‍ವಲ್ ಬಿಟ್ವಿನ್ ಪಾಲಿಟಿಕ್ಸ್ ಇರಬೇಕು. ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಸೋತು ಬಿಟ್ಟರು. ನಾನು 11 ಗಂಟೆಗೆ ವಾಪಸ್ ಬಂದುಬಿಟ್ಟೆ. ರಾಜಕೀಯದ ಮಧ್ಯೆ ಇವೆಲ್ಲ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು





