ರೈಲ್ವೇ ಚಹಾದ ಕಪ್‌ನಲ್ಲಿ ‘ಮೈ ಬೀ ಚೌಕೀದಾರ್’ ಬರಹ: ಚಹಾ ಕಪ್ ಹಿಂಪಡೆದ ಇಲಾಖೆ

ಹೊಸದಿಲ್ಲಿ, ಮಾ.29: ‘ಮೈ ಬೀ ಚೌಕೀದಾರ್’ ಎಂಬ ಪ್ರಧಾನಿ ಮೋದಿಯ ಚುನಾವಣಾ ಪ್ರಚಾರ ಘೋಷಣೆ ಮುದ್ರಿಸಿರುವ ಚಹಾದ ಕಪ್‌ಗಳನ್ನು ಶತಾಬ್ದಿ ರೈಲಿನ ಪ್ರಯಾಣಿಕರಿಗೆ ನೀಡುತ್ತಿರುವ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ , ಇಂತಹ ಕಪ್‌ಗಳನ್ನು ವಾಪಾಸು ಪಡೆಯುವುದಾಗಿ ಪ್ರಕಟಿಸಿರುವ ರೈಲ್ವೇ ಇಲಾಖೆ, ಕಪ್‌ಗಳನ್ನು ಪೂರೈಸಿದ ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ವಿಧಿಸುವುದಾಗಿ ತಿಳಿಸಿದೆ.
ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ನೀಡಲಾದ ಚಹಾದ ಕಪ್‌ನಲ್ಲಿ ‘ಮೈ ಬೀ ಚೌಕೀದಾರ್’ ಎಂಬ ಘೋಷಣೆ ಇರುವುದನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿ ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿದ್ದರು ಹಾಗೂ ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಿದ್ದರು.
ಸಂಕಲ್ಪ ಪ್ರತಿಷ್ಟಾನ ಎಂಬ ಎನ್‌ಜಿಒ ಸಂಸ್ಥೆಯ ಜಾಹೀರಾತನ್ನು ಚಹಾದ ಕಪ್‌ನಲ್ಲಿ ಮುದ್ರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಐಆರ್‌ಟಿಸಿ(ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್)ಯಿಂದ ಅನುಮೋದನೆ ಪಡೆದಿಲ್ಲ. ಮೇಲ್ವಿಚಾರಕರ/ ಅಡುಗೆ ಕೋಣೆಯ ಉಸ್ತುವಾರಿಯಿಂದ ಕರ್ತವ್ಯ ಲೋಪದ ಕುರಿತು ವರದಿ ಕೇಳಲಾಗಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಚಹಾದ ಕಪ್‌ಗಳನ್ನು ವಾಪಾಸು ಪಡೆಯಲಾಗಿದ್ದು ಕಪ್ ಪೂರೈಸಿದ ಗುತ್ತಿಗೆದಾರನಿಗೆ ದಂಡ ವಿಧಿಸಲಾಗುವುದು ಹಾಗೂ ಮೇಲ್ವಿಚಾರಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ವಿಧಿಸಲಾಗುವುದು ಮತ್ತು ಈ ದುರ್ನಡತೆಗಾಗಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.







