ಬಿಹಾರ ಮಹಾಮೈತ್ರಿಕೂಟ: ಕಾಂಗ್ರೆಸ್ ಮುಖಂಡರ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಾಟ್ನ, ಮಾ.29: ವಾಲ್ಮೀಕಿ ನಗರ ಕ್ಷೇತ್ರದ ಬದಲು ಪಶ್ಚಿಮ ಚಂಪಾರಣ್ ಅಥವಾ ಮಧುಬನಿ ಕ್ಷೇತ್ರವನ್ನು ಪಡೆಯಲು ಕಾಂಗ್ರೆಸ್ ವಿಫಲವಾಗಿರುವಂತೆಯೇ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಶುಕ್ರವಾರ ಬಿಹಾರದ 38 ಸ್ಥಾನಗಳಲ್ಲಿ ಸ್ಪರ್ಧಿಸಲಿರುವ ಮಹಾಮೈತ್ರಿಕೂಟದ ಅಭ್ಯರ್ಥಿಗಳನ್ನು ಘೋಷಿಸಿದರು. ಸಭೆಯಲ್ಲಿ ಕಾಂಗ್ರೆಸ್‌ನ ಯಾವುದೇ ಹಿರಿಯ ಮುಖಂಡರು ಉಪಸ್ಥಿತರಿರಲಿಲ್ಲ.
ಕಾಂಗ್ರೆಸ್‌ನ ಕೇಂದ್ರ ಮಂಡಳಿಯೊಂದಿಗೆ ಚರ್ಚಿಸಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ ಎಂದು ತೇಜಸ್ವಿ ಯಾದವ್ ಸ್ಪಷ್ಟಪಡಿಸಿದ್ದಾರೆ. ಪಾಟಲೀಪುತ್ರ ಕ್ಷೇತ್ರದಲ್ಲಿ ಲಾಲೂಪ್ರಸಾದ್ ಯಾದವ್ ಹಿರಿಯ ಪುತ್ರಿ ಮೀಸಾ ಭಾರತಿಗೆ ಆರ್‌ಜೆಡಿಯಿಂದ ಟಿಕೆಟ್ ನೀಡಲಾಗಿದೆ.
ಶಿಯೊಹಾರ್ ಮತ್ತು ಮಧುಬನಿ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇನ್ನಷ್ಟೇ ಘೋಷಿಸಬೇಕಿದೆ.
ಬಿಹಾರದ 40 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಆರ್‌ಜೆಡಿ ಈ ಬಾರಿ ಯಾದವ ಸಮುದಾಯದ ಎಂಟು, ಮುಸ್ಲಿಮ್ ಸಮುದಾಯದ ಮೂವರು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ. ಶಿಕ್ಷೆಗೊಳಗಾದ ಮೂವರು ಮುಖಂಡರ ಪತ್ನಿಯರಿಗೆ ಟಿಕೆಟ್ ನೀಡಲಾಗಿದೆ. ದರ್ಭಾಂಗ ಕ್ಷೇತ್ರದಲ್ಲಿ ಕೀರ್ತಿ ಆಝಾದ್‌ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಈ ಕ್ಷೇತ್ರಕ್ಕೆ ಮಾಜಿ ಸಚಿವ ಅಬ್ದುಲ್ ಸಿದ್ದಿಖಿಯನ್ನು ಆರ್‌ಜೆಡಿ ಕಣಕ್ಕಿಳಿಸಿದ್ದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶರದ್ ಯಾದವ್‌ರನ್ನು ಮಾಧೇಪುರ ಕ್ಷೇತ್ರದಿಂದ, ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್‌ಪ್ರತಾಪ್ ಯಾದವ್ ಮಾವ ಚಂದ್ರಿಕ ರಾಯ್‌ರನ್ನು ಸರಾಣ್ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಆದರೆ ಪತ್ನಿಯೊಂದಿಗೆ ವೈಮನಸ್ಸು ಹೊಂದಿರುವ ತೇಜ್‌ಪ್ರತಾಪ್ ಯಾದವ್, ತನ್ನ ವಿರೋಧದ ಮಧ್ಯೆಯೂ ಚಂದ್ರಿಕ ರಾಯ್‌ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ , ಪಕ್ಷದ ವಿದ್ಯಾರ್ಥಿ ವಿಭಾಗದ ಮಾರ್ಗದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
9 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಇದುವರೆಗೆ 7 ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಿಸಿದೆ. ಪಾಟ್ನಾ ಸಾಹಿಬ್ ಮತ್ತು ವಾಲ್ಮೀಕಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಶೀಘ್ರವೇ ಘೋಷಿಸಲಾಗುವುದು . ಬಿಜೆಪಿ ತೊರೆದು, ಎಪ್ರಿಲ್ 6ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಪಾಟ್ನಾ ಸಾಹಿಬ್ ಕ್ಷೇತ್ರದ ಹಾಲಿ ಸಂಸದ ಶತ್ರುಘ್ನ ಸಿನ್ಹರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆರ್‌ಎಲ್‌ಎಸ್‌ಪಿ ಹಾಗೂ ಹಿಂದುಸ್ತಾನಿ ಅವಾಮಿ ಮೋರ್ಚಾ(ಜಾತ್ಯಾತೀತ) ಮೈತ್ರಿಕೂಟದ ಇತರ ಪಕ್ಷಗಳಾಗಿವೆ.







