ಅಪರಾಧಿ ಪ್ರಕರಣಗಳ ಘೋಷಣೆ: ಆದೇಶ ಉಲ್ಲಂಘಿಸಿದ ಚು.ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ಮಾ.29: ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ವಿಚಾರಣೆಗೆ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟನೆ ನೀಡಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ನ್ಯಾಯಾಲಯ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲಂಘಿಸಿರುವ ಕಾರಣ ಕೇಂದ್ರ ಮತ್ತು ಚುನಾವಣಾ ಆಯೋಗದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ನೋಟಿಸ್ ಜಾರಿ ಮಾಡಿದೆ. ಆದೇಶವನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ, ಮೂವರು ಸಹಾಯಕ ಚುನಾವಣಾ ಆಯುಕ್ತರು, ಕಾನೂನು ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿಯಿಂದ ಸ್ಪಷ್ಟನೆ ಕೇಳಿದೆ. ಇದೊಂದು ಮುಖ್ಯ ವಿಷಯವಾಗಿದ್ದು ಇದರ ವಿಚಾರಣೆ ನಡೆಸಲೇಬೇಕು ಎಂದು ನ್ಯಾಯಾಧೀಶರಾದ ಆರ್.ಎಫ್ ನರಿಮನ್ ಮತ್ತು ವಿನೀತ್ ಸರನ್ ಅವರ ಪೀಠ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ನೋಟಿಸ್‌ಗೆ ಉತ್ತರಿಸಲು ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಎರಡು ವಾರಗಳ ಸಮಯ ನೀಡಿದೆ. ಕ್ರಿಮಿನಲ್ ಪ್ರಕರಣಗಳು ಬಾಕಿಯಿರುವ ರಾಜಕಾರಣಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಲು ಪಂಚ ಸದಸ್ಯ ಸಂವಿಧಾನ ಪೀಠ 2018ರ ಸೆಪ್ಟೆಂಬರ್ 25ರಂದು ನಿರಾಕರಿಸಿತ್ತು. ಚುನಾವಣಾ ಆಯೋಗವನ್ನು ಸಬಲೀಕರಣಗೊಳಿಸುವಂತೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ ಸಂಸತ್‌ಗೆ ಸೂಚಿಸಿತ್ತು. ಆದರೆ, ಮತದಾರರಿಗೆ ಮಾಹಿತಿಯುಕ್ತ ಆಯ್ಕೆಯನ್ನು ಮಾಡಲು ಸಹಾಯವಾಗುವಂತೆ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಣೆ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿತ್ತು.
ಜೊತೆಗೆ ಆಯಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ವಿರುದ್ಧ ಇರುವ ಕ್ರಮಿನಲ್ ಪ್ರಕರಣಗಳ ವಿವರವನ್ನು ತಮ್ಮ ಜಾಲತಾಣಗಳಲ್ಲಿ ಹಾಕಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.







