ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಪೂರ್ಣಗೊಳಿಸಲು ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ

ಹೊಸದಿಲ್ಲಿ, ಮಾ.29: ಬಾಂಬೆ ಉಚ್ಚ ನ್ಯಾಯಾಲಯವು 2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮವನ್ನು ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಗುಜರಾತ್ ಸರಕಾರಕ್ಕೆ ಆದೇಶಿಸಿದೆ.
2002ರ ಗುಜರಾತ್ ದಂಗೆಗಳ ಸಂದರ್ಭ 19ರ ಹರೆಯದ,ಆಗ ಗರ್ಭಿಣಿಯಾಗಿದ್ದ ಬಾನು ಮೇಲೆ 11 ಜನರ ಗುಂಪು ಅತ್ಯಾಚಾರವೆಸಗಿತ್ತು. ಅಹ್ಮದಾಬಾದ್ ಬಳಿ ಈ ಹೇಯ ಕೃತ್ಯ ನಡೆದಿದ್ದು,ದಂಗೆಕೋರರು ಬಾನುವಿನ ಮೂರರ ಹರೆಯದ ಮಗು ಸೇರಿದಂತೆ ಆಕೆಯ ಕುಟುಂಬದ 14 ಜನರನ್ನು ಹತ್ಯೆಗೈದಿದ್ದರು.
ತಮ್ಮ ಕರ್ತವ್ಯ ನಿರ್ವಹಿಸದ್ದಕ್ಕಾಗಿ ಮತ್ತು ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಸಂದರ್ಭ ಸಾಕ್ಷಾಧಾರಗಳನ್ನು ತಿರುಚಿದ್ದಕ್ಕಾಗಿ ಐವರು ಪೊಲೀಸ್ ಸಿಬ್ಬಂದಿಗಳನ್ನೂ ಬಾಂಬೆ ಉಚ್ಚ ನ್ಯಾಯಾಲಯವು ದೋಷಿಗಳೆಂದು ಘೊಷಿಸಿತ್ತು.
ಹೆಚ್ಚಿನ ಪರಿಹಾರವನ್ನು ಕೋರಿ ಬಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎ.23ರಂದು ನಡೆಸುವುದಾಗಿ ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ತಿಳಿಸಿತು. ಗುಜರಾತ್ ಸರಕಾರವು ಮುಂದಿಟ್ಟಿರುವ ಐದು ಲಕ್ಷ ರೂ.ಪರಿಹಾರವನ್ನು ತಾನು ಸ್ವೀಕರಿಸುವುದಿಲ್ಲ ಎಂದು ಬಾನು ಪೀಠಕ್ಕೆ ತಿಳಿಸಿದರು.
ಉಚ್ಚ ನ್ಯಾಯಾಲಯವು ತಮ್ಮನ್ನು ದೋಷಿಗಳನ್ನಾಗಿಸಿದ ತೀರ್ಪನ್ನು ಪ್ರಶ್ನಿಸಿ ಇಬ್ಬರು ವೈದ್ಯರು ಮತ್ತು ನಾಲ್ವರು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯವು ಜುಲೈ 2017ರಲ್ಲಿ ವಜಾಗೊಳಿಸಿತ್ತು. ಅವರ ವಿರುದ್ಧ ಸ್ಪಷ್ಟ ಸಾಕ್ಷಾಧಾರಗಳಿದ್ದರೂ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿರುವುದು ಅಸಮಂಜಸವಾಗಿದೆ ಎಂದು ಅದು ಬೆಟ್ಟು ಮಾಡಿತ್ತು.







