ಉಡುಪಿ ಜಿಲ್ಲೆಯಲ್ಲಿ 30 ‘ಸಖೀ’ ಮಹಿಳಾ ಮತಗಟ್ಟೆಗಳು
ಮಣಿಪಾಲ, ಮಾ.29: ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 14,98,016 ಮತದಾರರಿದ್ದು, ಈ ಪೈಕಿ 7,65,823 ಮಹಿಳಾ ಮತದಾರರು ಹಾಗೂ 7,32,193 ಪುರುಷ ಮತದಾರರಿದ್ದಾರೆ. ಇವರಲ್ಲಿ 30,826 ಮಂದಿ ಮೊದಲ ಬಾರಿ ಮತದಾನ ಮಾಡುವ ಅರ್ಹತೆ ಹೊಂದಿರುವ ಯುವ ಮತದಾರ ರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮಣಿಪಾಲದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯತಿಳಿಸಿದ ಅವರು ಜಿಲ್ಲೆಯಲ್ಲಿ 11,861 ಅಂಗವಿಕಲ ಹಾಗೂ ಮಾನಸಿಕ ದೌರ್ಬಲ್ಯವುಳ್ಳ ಮತದಾರರನ್ನು ಗುರುತಿಸಲಾಗಿದೆ. ಇವರಿಗೆ ಮತದಾನ ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳಾದ ವೀಲ್‌ಚಯರ್, ದಪ್ಪದ ಗ್ಲಾಸ್ ಮುಂತಾದ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು.
ಶೇ.99.9 ಎಪಿಕ್: ಜಿಲ್ಲೆಯ ಶೇ.99.9ರಷ್ಟು ಮತದಾರರಿಗೆ ಅವರ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು (ಎಪಿಕ್ ಕಾರ್ಡ್) ಹಂಚಲಾಗಿದೆ. ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ, ಪುರುಷ ಮತದಾರರಿಗಿಂತ ಅಧಿಕ ವಿರುವುದರಿಂದ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 30ರಷ್ಟು ‘ಸಖೀ’ ಮಹಿಳಾ ಮತಗಟ್ಟೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಅಲ್ಲದೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಅತಿ ಹಿಂದುಳಿದ ಗುಡ್ಡಗಾಡು ಪ್ರದೇಶದ ಮತದಾರರಿಗಾಗಿಯೇ ಮೂರು ಬುಡಕಟ್ಟು ಜನರ ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಅದೇ ರೀತಿ ಅಂಗವಿಕಲರಿಗಾಗಿ ಮೂರು ಮತಗಟ್ಟೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.
ಮತದಾನಕ್ಕೆ 11 ದಾಖಲೆಗಳು: ಮತದಾರರು ಮತದಾನಕ್ಕೆ ತೆರಳುವಾಗ ಕೇಂದ್ರ ಚುನಾವಣಾ ಆಯೋಗ ನೀಡಿದ ಮತದಾರನ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್)ಯನ್ನು ತೋರಿಸಿ ಮತದಾನ ಮಾಡುವಂತೆ ತಿಳಿಸಲಾಗಿದೆ. ಒಂದು ವೇಳೆ ಗುರುತಿನ ಚೀಟಿ ಹಾಜರು ಪಡಿಸಲು ಅಸಾಧ್ಯ ವಾದರೆ ಈ ಕೆಳಗೆ ತಿಳಿಸಿದ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಹಾಜರುಪಡಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಕೇವಲ ವೋಟರ್ ಸ್ಲಿಪ್ ಮಾತ್ರ ತೋರಿಸಿ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ದಾಖಲೆಗಳು: ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ಕೇಂದ್ರ, ರಾಜ್ಯ, ಸಾರ್ವಜನಿಕ ಉದ್ದಿಮೆ ಸಂಸ್ಥೆ ತಮ್ಮ ಉದ್ಯೋಗಿಗಳಿಗೆ ನೀಡುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್, ಅಂಚೆ ಕಚೇರಿ ಪಾಸ್‌ಬುಕ್, ಪಾನ್‌ಕಾರ್ಡ್, ಎನ್‌ಪಿಆರ್ ಅಡಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಎಂಎನ್‌ಆರ್‌ಇಜಿ ನೀಡಿ ಉದ್ಯೋಗ ಕಾರ್ಡ್, ಕಾರ್ಮಿಕ ಇಲಾಖೆ ನೀಡಿದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಎಂಪಿಗಳು ಶಾಸಕರಿಗೆ ನೀಡಲಾದ ಅಧಿಕೃತ ಸರಕಾರಿ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್.
1837 ಮತಗಟ್ಟೆಗಳು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಒಟ್ಟು 1837 ಮತಗಟ್ಟೆಗಳು ಇರಲಿವೆ. ಇವುಗಳ ಪೈಕಿ ಉಡುಪಿ ಜಿಲ್ಲೆ ಯಲ್ಲಿ 1,111 ಮತಗಟ್ಟೆಗಳಿದ್ದು, ಒಟ್ಟು 5,616 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು 1,401, ಒಂದನೇ ಮತಗಟ್ಟೆ ಅಧಿಕಾರಿಗಳು 1,405, ಮೂರು ಮತ್ತು ನಾಲ್ಕನೇ ಮತಗಟ್ಟೆ ಅದಿಕಾರಿಗಳು 2,810 ಮಂದಿ.. ಇವರಿಗೆ ಈಗಾಗಲೇ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಎ. 7ರಂದು ಎರಡನೇ ಹಂತದ ತರಬೇತಿ ನೀಡಲಾಗುತ್ತದೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಆಯುಧ ಪರವಾನಿಗೆ ಹೊಂದಿರುವ 4,630 ವಿವಿಧ ಆಯುಧಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಲು ಆದೇಶಿಸಿದ್ದು, ಈವರೆಗೆ 3,693 ಆಯುಧಗಳನ್ನು ಈಗಾಗಲೇ ಠೇವಣಿ ಇಡಲಾಗಿದೆ. ಇವುಗಳಲ್ಲಿ ರೈತರ ಆಯುಧಗಳೂ ಸೇರಿವೆ ಎಂದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 7 ಪ್ರಕರಣಗಳಲ್ಲಿ 16,65,810ರೂ. ನಗದು ಹಣವನ್ನು ವಶಪಡಿಸಿಕೊಳ್ಳ ಲಾಗಿದೆ. ಈ ಪೈಕಿ ಪರಿಶೀಲನೆಯ ಬಳಿಕ ಒಂದು ಪ್ರಕರಣದಲ್ಲಿ 3,25,960 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸಿ-ವಿಸಿಲ್ ಆ್ಯಪ್ ಮೂಲಕ ಒಟ್ಟು 42 ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 32 ಅರ್ಜಿಗಳ ವಿಚಾರಣೆ ನಡೆಸಿ ವಿಲೇಗೊಳಿಸ ಲಾಗಿದೆ ಹಾಗೂ 10 ಪ್ರಕರಣಗಳು ಡಮ್ಮಿ ಪ್ರಕರಣಗಳಾಗಿವೆ ಎಂದು ಅವರು ವಿವರಿಸಿದರು.
ಮಾದರಿ ನೀತಿ ಸಂಹಿತೆ ಜ್ಯಾರಿಗೊಂಡ ಬಳಿಕ ಅಬಕಾರಿ ಇಲಾಖೆಯವರು 15,580.69 ಲೀ.ಮದ್ಯ ಹಾಗೂ ಪೊಲೀಸ್ ಇಲಾಖೆ 2.520ಲೀ. ಮದ್ಯ ವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 3 ಲಾರಿ, 2 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೊತ್ತ 1.06 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದರು.
ಅಮೃತ ಶೆಣೈಗೆ ನೋಟೀಸು ಜಾರಿ
ಜಿಲ್ಲಾ ಸಮಿತಿಯಿಂದ ಪೂರ್ವಾನುಮತಿ ಪಡೆಯದೇ ಪಾದಯಾತ್ರೆಯ ವೇಳೆ ಸಾರ್ವಜನಿಕರಿಂದ ಚುನಾವಣೆಗಾಗಿ ದೇಣಿಗೆ ಸಂಗ್ರಹಿಸಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಮೃತ ಶೆಣೈ ಪಿ. ಅವರಿಗೆ ವಿವರಣೆ ನೀಡುವಂತೆ ಕೋರಿ ನೋಟೀಸು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಮೃತ ಶೆಣೈ ಪಾದಯಾತ್ರೆಗೆ ಅನುಮತಿ ಕೋರಿದ್ದರು. ಆದರೆ ಈ ವೇಳೆ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಬಗ್ಗೆ ಯಾವುದೇ ಅನುಮತಿ ಕೇಳಿರಲಿಲ್ಲ ಎಂದರು. ಸಂಗ್ರಹವಾದ ಹಣದ ಬಗ್ಗೆಯೂ ಅವರು ಮಾಹಿತಿ ಹಾಗೂ ದಾಖಲೆಗಳನ್ನು ನೀಡಬೇಕಾಗಿದೆ ಎಂದರು.
ಮಾಹಿತಿಗಳನ್ನು ನೀಡಿ: ಕೃಷ್ಣ ಕುನಾಲ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಸಲು ಮಾಧ್ಯಮದವರು ಪೂರ್ಣ ಸಹಕಾರ ನೀಡುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿರುವ ರಾಜಸ್ತಾನದ ಐಎಎಸ್ ಅಧಿಕಾರಿ ಕೃಷ್ಣ ಕುನಾಲ್ ವಿನಂತಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಾಗ, ತಮಗೆ ದೊರೆಯುವ ಮಾಹಿತಿಗಳನ್ನು ‘ಸಿ-ವಿಜಿಲ್’ ಆ್ಯಪ್ ಮೂಲಕ ನಮಗೂ ನೀಡಿ. ಆಗ ತಕ್ಷಣ ಕಾರ್ಯಪ್ರವೃತ್ತರಾಗಲು ನಮಗೂ ಸಾಧ್ಯವಾಗುತ್ತದೆ ಎಂದರು. ನೀವು ಈ ಚುನಾವಣೆಯಲ್ಲಿ ಕಣ್ಣು ಮತ್ತು ಕಿವಿ ಇದ್ದಂತೆ. ನಿಮ್ಮ ಸಹಕಾರ ಅಗತ್ಯ ಎಂದರು.







