ಜೆಡಿಎಸ್ ನವರ ದುಡ್ಡು ತಿನ್ನಿ, ಬಿಜೆಪಿಗೆ ಮತ ಹಾಕಿ: ಮಾಜಿ ಶಾಸಕ ಸುರೇಶ್ ಗೌಡ
"ಅವರು ಊರಿನ ಒಳಗೆ ಬಂದರೆ ದೊಣ್ಣೆ ಹಿಡಿದು ನಿಂತುಕೊಳ್ಳಿ"

ತುಮಕೂರು, ಮಾ.29: ಜೆಡಿಎಸ್ ನವರ ದುಡ್ಡು ತಿನ್ನಿ, ಆದರೆ ಬಿಜೆಪಿಗೆ ಮತಹಾಕಿ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ತಮ್ಮ ಪಕ್ಷದವರನ್ನು ಉದ್ದೇಶಿಸಿ ಮಾತನಾಡುವ ವೇಳೆ ಜೆಡಿಎಸ್ ಪಕ್ಷದ ಹಾಗೂ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿ ಶಂಕರ್ ಅವರ ವಿರುದ್ಧ ಹರಿಹಾಯ್ದ ಅವರು, ನಮ್ಮ ತೆರಿಗೆ ದುಡ್ಡನ್ನು ನಮಗೇ ಹಂಚುತ್ತಾರೆ. ಅವನು ಮನೆಯಿಂದ ತಂದು ನೀಡುವುದಿಲ್ಲ, ನೀವು ತಿನ್ನಿ, ತಿಂದು ಬಿಜೆಪಿಗೆ ಮತ ಹಾಕಿ ಎಂದು ಹೇಳಿದ್ದಾರೆ.
ಜೆಡಿಎಸ್ ನವರು ಕೌರವ ವಂಶಸ್ಥರು, ಅವರ ವಿರುದ್ಧ ಯುದ್ಧ ಮಾಡೋಣ. ಜೆಡಿಎಸ್‍ನವರು ಯಾರೇ ಬಂದರೂ ಊರಿನ ಒಳಗೆ ಬಿಡಬೇಡಿ, ನೀರಿನ ಕಳ್ಳ, ನೀರಿನ ಕಳ್ಳ ಅಂತ ಕೂಗಿ ದೊಣ್ಣೆ ಹಿಡಿದು ನಿಂತು ಕೊಳ್ಳಿ. ನಾನು ಇರುತ್ತೇನೆ, ಅವರನ್ನು ಹೇಗೆ ಹೆದರಿಸಬೇಕು ಎಂದು ನನಗೆ ಗೊತ್ತು ಎನ್ನುವ ಸುರೇಶ್ ಗೌಡರ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿವೆ.
ಸುರೇಶ್ ಗೌಡ ವಿರುದ್ಧ ದೂರು: ಜೆಡಿಎಸ್ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿರುವ ಮಾಜಿ ಶಾಸಕ ಸುರೇಶ್‍ಗೌಡ ವಿರುದ್ಧ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಸುರೇಶ್‍ಗೌಡ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸಹಾಯಕ ಚುನಾವಣಾಧಿಕಾರಿಗಳಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದು, ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಚುನಾವಣಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.








