ನಿಖಿಲ್ ನಾಮಪತ್ರಕ್ಕೆ ಆಕ್ಷೇಪಣೆ: ಸುಮಲತಾ ಅಂಬರೀಷ್‍ಗೆ ನೊಟೀಸ್ ಜಾರಿ

ಮಂಡ್ಯ, ಮಾ.29: ಲೋಕಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರಕ್ಕೆ ಆಕ್ಷೇಪಣೆ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ನೊಟೀಸ್ ಜಾರಿ ಮಾಡಿದ್ದಾರೆ.
ಐಪಿಸಿ ಸೆಕ್ಷನ್ 189ರಡಿಯಲ್ಲಿ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದೆಂದು ನೊಟೀಸ್ ನೀಡಿರುವ ಅವರು, ನೊಟೀಸ್‍ಗೆ ತಲುಪಿದ ಒಂದು ದಿನದೊಳಗಾಗಿ ಸಮಾಜಾಯಿಸಿ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ನಿಖಿಲ್ ನಾಮಪತ್ರದಲ್ಲಿ ನೂನ್ಯತೆ ಇದ್ದು, ತಮ್ಮ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿ ವರ್ಗ ಯತ್ನ ನಡೆಸುತ್ತಿದೆ ಎಂದು ತಾವು ಆರೋಪಿಸಿರುವುದು ನನ್ನ ವ್ಯಕ್ತಿತ್ವವನ್ನು ಸಾಮಾಜಿಕವಾಗಿ ಘಾಸಿಗೊಳಿಸುವ ಉದ್ದೇಶವಾಗಿದೆ ಎಂದು ನೊಟೀಸ್‍ನಲ್ಲಿ ಹೇಳಲಾಗಿದೆ.
ಊಹಾಪೋಹದ ಮಾಹಿತಿಯನ್ನು ಅಧಿಕೃತವೆಂದು ತಾವು ಹೇಳಿಕೆ ನೀಡಿದ್ದೀರಿ. ಇದರಿಂದ ಜಿಲ್ಲೆಯ ಅಧಿಕಾರಿ ವರ್ಗ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವಂತಾಗಿದೆ. ಅಧಿಕಾರಿಗಳು ತಮ್ಮ ಚುನಾವಣಾ ಕಾರ್ಯವನ್ನು ಸಮರ್ಥವಾಗಿ ನಡೆಸಲು ತಡೆಗಟ್ಟುವ ಪ್ರಯತ್ನ ನಡೆಸಿದ್ದೀರಿ ಎಂದು ಅವರು ಹೇಳಿದ್ದಾರೆ.





