1984ರ ಸಿಖ್ ವಿರೋಧಿ ದಂಗೆಗಳು: ತನಿಖೆಯನ್ನು ಪೂರ್ಣಗೊಳಿಸಲು ಸಿಟ್‌ಗೆ ಎರಡು ತಿಂಗಳ ಹೆಚ್ಚಿನ ಕಾಲಾವಕಾಶ
ಹೊಸದಿಲ್ಲಿ, ಮಾ.29: 1984ರ ಸಿಖ್ ವಿರೋಧಿ ದಂಗೆಗಳ 186 ಪ್ರಕರಣಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಲು ವಿಶೇಷ ತನಿಖಾ ತಂಡ(ಸಿಟ್)ಕ್ಕೆ ಎರಡು ತಿಂಗಳ ಹೆಚ್ಚಿನ ಕಾಲಾವಕಾಶವನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಂಜೂರು ಮಾಡಿದೆ.
ಶೇ.50ರಷ್ಟು ಕಾರ್ಯವನ್ನು ಮುಗಿಸಲಾಗಿದೆ ಮತ್ತು ತನಿಖೆಯನ್ನು ಪೂರ್ಣಗೊಳಿಸಲು ತನಗೆ ಇನ್ನೂ ಎರಡು ತಿಂಗಳುಗಳ ಕಾಲಾವಕಾಶ ಬೇಕು ಎಂದು ಸಿಟ್ ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಸ್.ಅಬ್ದುಲ ನಝೀರ್ ಅವರ ಪೀಠವು ಗಡುವನ್ನು ವಿಸ್ತರಿಸಿ ಆದೇಶಿಸಿತು.
ದಂಗೆಗಳಲ್ಲಿ ಹೆಸರಿಸಲಾಗಿರುವ 62 ಪೊಲೀಸರ ಪಾತ್ರದ ಕುರಿತು ತನಿಖೆಯನ್ನು ಕೋರಿ ದಿಲ್ಲಿ ಸಿಖ್ ಗುರುದ್ವಾರಾ ವ್ಯವಸ್ಥಾಪನಾ ಸಮಿತಿಯ ಸದಸ್ಯ ಎಸ್.ಗುರ್ಲಾಡ್ ಸಿಂಗ್ ಕಹ್ಲೋನ್ ಅವರ ಅರ್ಜಿಯ ಕುರಿತಂತೆ ಕಕ್ಷಿಗಳಿಗೆ ನೋಟಿಸ್‌ಗಳನ್ನೂ ನ್ಯಾಯಾಲಯವು ಹೊರಡಿಸಿತು.
ಈ ಮೊದಲು ಮುಕ್ತಾಯ ವರದಿಗಳನ್ನು ಸಲ್ಲಿಸಲಾಗಿದ್ದ 186 ದಂಗೆ ಪ್ರಕರಣಗಳಲ್ಲಿ ಹೆಚ್ಚಿನ ತನಿಖೆಯ ಉಸ್ತುವಾರಿಗಾಗಿ ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಧೀಶ ನ್ಯಾ.ಎಸ್.ಎನ್.ಧಿಂಗ್ರಾ ನೇತೃತ್ವದ ಸಿಟ್ ಅನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಜ.11ರಂದು ರಚಿಸಿತ್ತು.







