ಜೆಎನ್‌ಯು ರಾಷ್ಟ್ರದ್ರೋಹ ಪ್ರಕರಣ: ಡಿಸಿಪಿ ಗೈರುಹಾಜರಿಗಾಗಿ ದಿಲ್ಲಿ ಪೊಲೀಸರ ಬೆಂಡೆತ್ತಿದ ಕೋರ್ಟ್

ಹೊಸದಿಲ್ಲಿ, ಮಾ.29: ಜೆಎನ್‌ಯು ರಾಷ್ಟ್ರದ್ರೋಹ ಪ್ರಕರಣದಲ್ಲಿ ವರದಿಯನ್ನು ಸಲ್ಲಿಸಬೇಕಿದ್ದ ಡಿಸಿಪಿಯ ಗೈರುಹಾಜರಿಯಿಂದಾಗಿ ಸಿಟ್ಟಿಗೆದ್ದ ದಿಲ್ಲಿ ಮಹಾನಗರ ನ್ಯಾಯಾಲಯವು ಶುಕ್ರವಾರ ದಿಲ್ಲಿ ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿತು.
ನ್ಯಾ.ದೀಪಕ ಶೆರಾವತ್ ಅವರು ಶನಿವಾರ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಂಬಂಧಿಸಿದ ಡಿಸಿಪಿಗೆ ಹೊಸದಾಗಿ ಸಮನ್ಸ್ ಹೊರಡಿಸಿದರು.
ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಅಗತ್ಯ ಅನುಮತಿಯನ್ನು ಅಧಿಕಾರಿಗಳು ಇನ್ನಷ್ಟೇ ನೀಡಬೇಕಿದೆ ಮತ್ತು ಅನುಮತಿಯನ್ನು ಪಡೆದುಕೊಳ್ಳಲು 2ರಿಂದ 3 ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ದಿಲ್ಲಿ ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಯಾಲಯವು ಇದಕ್ಕಾಗಿ ಪೊಲೀಸರಿಗೆ ಮೂರು ವಾರಗಳ ಕಾಲಾವಕಾಶವನ್ನು ಮಂಜೂರು ಮಾಡಿತ್ತು.
ಪೊಲೀಸರು ಜ.14ರಂದು ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. 2016,ಫೆ.9ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದಿದ್ದ ಕಾರ್ಯಕ್ರಮದ ಸಂದರ್ಭ ಕನ್ಹಯ್ಯ ಕುಮಾರ್ ಮೆರವಣಿಗೆಯ ನೇತೃತ್ವವನ್ನು ವಹಿಸಿದ್ದರು ಮತ್ತು ರಾಷ್ಟ್ರದ್ರೋಹಿ ಘೋಷಣೆಗಳನ್ನು ಬೆಂಬಲಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಡಿಸಿಪಿಯಿಂದ ವರದಿಯನ್ನು ಕೇಳಿದ್ದು,ಇಂದು ಅದನ್ನು ಸಲ್ಲಿಸುವಂತೆ ಸೂಚಿಸಿತ್ತು.







