ಸಿಪಿಐ ಚುನಾವಣಾ ಪ್ರಣಾಳಿಕೆ ಬಿಡುಗಡೆ,ಮಾಸಿಕ 9,000 ರೂ.ಪಿಂಚಣಿ ಭರವಸೆ

ಹೊಸದಿಲ್ಲಿ, ಮಾ.29: ಲೋಕಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆಯನ್ನು ಸಿಪಿಐ ಶುಕ್ರವಾರ ಬಿಡುಗಡೆಗೊಳಿಸಿದ್ದು, ಮಾಸಿಕ ಕನಿಷ್ಠ 9,000 ರೂ.ಪಿಂಚಣಿ,ದಿಲ್ಲಿ ಮತ್ತು ಪುದುಚೇರಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ,ರೈತರಿಗೆ ಒಂದು ಬಾರಿಗೆ ಸಮಗ್ರ ಸಾಲಮನ್ನಾದ ಭರವಸೆಗಳನ್ನು ಪ್ರಕಟಿಸಿದೆ. ಕೃಷಿ ಕಾರ್ಮಿಕರಿಗಾಗಿ ಕಾನೂನು ಮತ್ತು ಕೃಷಿಗಾಗಿ ಪ್ರತ್ಯೇಕ ಮುಂಗಡಪತ್ರವನ್ನೂ ಅದು ಪ್ರಸ್ತಾಪಿಸಿದೆ.
ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಖಾತರಿ ಉದ್ಯೋಗ ದಿನಗಳ ಸಂಖ್ಯೆಯನ್ನು 200 ದಿನಗಳಿಗೆ ಹೆಚ್ಚಿಸುವುದಾಗಿ ಮತ್ತು ಕೃಷಿ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕಾನೂನಾತ್ಮಕ ಕನಿಷ್ಠ ವೇತನಕ್ಕೆ ಸಮನಾದ ಕೂಲಿ ಪಾವತಿಯಾಗುವಂತೆ ನೋಡಿಕೊಳ್ಳುವುದಾಗಿಯೂ ಸಿಪಿಐ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ಸಿಪಿಐ ನಾಯಕ ಡಿ.ರಾಜಾ ಅವರು ಆರೆಸ್ಸೆಸ್-ಬಿಜೆಪಿ ವಿರುದ್ಧ ತೀವ ದಾಳಿ ನಡೆಸಿ,ಅವು ಇತರ ಬಲಪಂಥೀಯ ತೀವ್ರವಾದಿ ಸಂಘಟನೆಗಳೊಂದಿಗೆ ಸೇರಿ ತಮ್ಮ ವಿಭಜಕ, ಪಂಥೀಯ, ಕೋಮುವಾದಿ ಮತ್ತು ಫ್ಯಾಸಿಸ್ಟ್ ಸಿದ್ಧಾಂತ ಹಾಗೂ ಅಜೆಂಡಾವನ್ನು ಕಾರ್ಯಗತಗೊಳಿಸುತ್ತಿವೆ ಎಂದರು.
ಎಲ್ಲ ನಿವೃತ್ತ ರಕ್ಷಣಾ ಸಿಬ್ಬಂದಿಗಳಿಗೆ ಸಮಾನ ದರ್ಜೆ ಸಮಾನ ಪಿಂಚಣಿ ಅನುಷ್ಠಾನ,ಪಡಿತರ ವ್ಯವಸ್ಥೆಯ ಸಾರ್ವತ್ರೀಕರಣ.ಜಿಡಿಪಿಯ ಶೇ.6ರಷ್ಟು ಮೊತ್ತ ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆ ಹಾಗೂ ಇಸಿ, ಸಿಎಜಿ, ಆರ್‌ಬಿಐ, ಸಿಬಿಐ, ಸಿವಿಸಿ ಮತ್ತು ಇತರ ನಿಗಾ ಸಂಸ್ಥೆಗಳಿಗೆ ಕಾರ್ಯಾತ್ಮಕ ಸ್ವಾಯತ್ತತೆ ನೀಡಿಕೆ ಇತ್ಯಾದಿ ಭರವಸೆಗಳನ್ನೂ ಸಿಪಿಐ ಪ್ರಕಟಿಸಿದೆ.







