ವಿಜ್ಞಾನಿಗಳ ಕೆಲಸಕ್ಕೆ ಮೋದಿ ತನ್ನ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಕಲಬುರ್ಗಿ, ಮಾ. 29: ಪ್ರಧಾನಿ ಮೋದಿ ಕಾಂಗ್ರೆಸ್ ಸಿದ್ಧಪಡಿಸಿದ ಮನೆಗೆ ಸುಣ್ಣ-ಬಣ್ಣ ಬಳಿದು ನಮ್ಮ ಮನೆ ಹೇಗಿದೆ ನೋಡಿ ಎಂದು ಕೇಳುತ್ತಿದ್ದಾರೆ. ಆದರೆ, ಮನೆ ಕಟ್ಟಿದ್ದು ಕಾಂಗ್ರೆಸ್ ಎಂಬುದನ್ನು ಅವರು ಮರೆತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜ್ಞಾನಿಗಳ ಕೆಲಸಕ್ಕೆ ಮೋದಿ ತನ್ನ ಬೆನ್ನು ತಾವೆ ತಟ್ಟಿಕೊಳ್ಳುತ್ತಿದ್ದಾರೆ. ಉಪಗ್ರಹ ನಿರೋಧಕ ಕ್ಷಿಪಣಿ(ಎ-ಸ್ಯಾಟ್) ಯುಪಿಎ ಅವಧಿಯಲ್ಲಿ ಸಿದ್ಧಗೊಂಡಿತ್ತು. 2012ರಲ್ಲೆ ಇದರ ಉಡಾವಣೆಗೆ ಸಿದ್ಧತೆ ಆರಂಭವಾಗಿತ್ತು ಎಂದು ಹೇಳಿದರು.
ಯುಪಿಎ ಸರಕಾರ ಸಿದ್ಧಪಡಿಸಿದ್ದನ್ನು ಈಗ ಉಡಾವಣೆ ಮಾಡಿ ತಮ್ಮದೆಂದು ಶಹಬ್ಬಾಷ್ ಗಿರಿ ತೆಗೆದುಕೊಳ್ಳುತ್ತಿದ್ದಾರೆ ಎಂದ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಸರಕಾರದಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು. ಆದರೆ ನಾವೆಂದೂ ಈ ರೀತಿ ಪ್ರಚಾರ ಪಡೆಯಲಿಲ್ಲ. ದೇಶದ ಪ್ರಧಾನಮಂತ್ರಿ ಯಾರೇ ಇದ್ದರೂ, ಸೈನಿಕರು ಅವರೇ ಇರುತ್ತಾರೆ. ಸೈನಿಕರು, ವಿಜ್ಞಾನಿಗಳು ಮಾಡಿದ ಕೆಲಸಕ್ಕೆ ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.







