ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿದ ಅರ್ಜಿ ಕುರಿತು ಕೇಂದ್ರ,ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ಮಾ,29: ಚುನಾವಣೆಗಳಿಗೆ ಸ್ಪರ್ಧಿಸುವ ಮುನ್ನ ಎಲ್ಲ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಪೂರ್ವೇತಿಹಾಸಗಳನ್ನು ಘೋಷಿಸುವಂತೆ ನಿರ್ದೇಶಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆಗಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ಗಳನ್ನು ಹೊರಡಿಸಿದೆ.
2018,ಸೆ.25ರ ತನ್ನ ತೀರ್ಪನ್ನು ಪಾಲಿಸದ್ದಕ್ಕಾಗಿ ಉತ್ತರಿಸುವಂತೆ ಮೂವರು ಉಪ ಚುನಾವಣಾ ಆಯುಕ್ತರು,ಕಾನೂನು ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿಗೂ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ವಿನೀತ್ ಸರನ್ ಅವರ ಪೀಠವು ಸೂಚಿಸಿತು.
ನ್ಯಾಯಾಲಯವು ವಕೀಲ ಅಶ್ವಿನಿ ಕುಮಾರ ಉಪಾಧ್ಯಾಯ ಅವರು ಸಲ್ಲಿಸರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.
ಚುನಾವಣೆಗಳಿಗೆ ಸ್ಪರ್ಧಿಸುವ ಮುನ್ನ ಎಲ್ಲ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಪೂರ್ವೇತಿಹಾಸಗಳನ್ನು ಚುನಾವಣಾ ಆಯೋಗದ ಮುಂದೆ ಘೋಷಿಸಬೇಕು ಎಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ವಾನುಮತದಿಂದ ಎತ್ತಿ ಹಿಡಿದಿದ್ದ ಐವರು ನ್ಯಾಯಾಧಿಶರ ಸಂವಿಧಾನ ಪೀಠವು,ಅಭ್ಯರ್ಥಿಗಳ ಪೂರ್ವೇತಿಹಾಸಗಳಿಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಸೂಚಿಸಿತ್ತು.
ಚುನಾವಣಾ ಆಯೋಗವು ಕಳೆದ ವರ್ಷದ ಅಕ್ಟೋಬರ್ 10ರಂದು ಪರಿಷ್ಕೃತ ಫಾರ್ಮ್-26ಕ್ಕೆ ಸಂಬಂಧಿಸಿ ಅಧಿಸೂಚನೆ ಮತ್ತು ಕ್ರಿಮಿನಲ್ ಪೂರ್ವೇತಿಹಾಸಗಳ ಘೋಷಣೆಗಾಗಿ ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಿರ್ದೇಶಗಳನ್ನು ಹೊರಡಿಸಿತ್ತು.
ಆದರೆ ಆಯೋಗವು ಚುನಾವಣಾ ಚಿಹ್ನೆ ಆದೇಶ,1968ನ್ನಾಗಲೀ ಮಾದರಿ ನೀತಿ ಸಂಹಿತೆಯನ್ನಾಗಲೀ ತಿದ್ದುಪಡಿಗೊಳಿಸಿಲ್ಲ,ಹೀಗಾಗಿ ಅಧಿಸೂಚನೆಗೆಗೆ ಕಾನೂನಿನ ಮಾನ್ಯತೆಯಿಲ್ಲ ಎಂದು ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವೇತಿಹಾಸಗಳ ಪ್ರಕಟಣೆಗಾಗಿ ಪ್ರಮುಖ ವೃತ್ತಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪಟ್ಟಿಯನ್ನಾಗಲೀ ಕ್ರಿಮಿನಲ್ ಪೂರ್ವೇತಿಹಾಸಗಳ ಘೋಷಣೆಗಾಗಿ ಸಮಯವನ್ನಾಗಲೀ ಪ್ರಕಟಿಸಿಲ್ಲ. ಹೀಗಾಗಿ ಅಭ್ಯರ್ಥಿಗಳು ಅವುಗಳನ್ನು ಜನಪ್ರಿಯವಲ್ಲದ ಪತ್ರಿಕೆಗಳಲ್ಲಿ ಮತ್ತು ತಮಗೆ ಬೇಕಾದ ಸಮಯದಲ್ಲಿ ಸುದ್ದಿವಾಹಿನಿಗಳಲ್ಲಿ ಪ್ರಕಟಿಸುತ್ತಿದ್ದಾರೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.







