ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು: ಬಳ್ಳಾರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ

ಬಳ್ಳಾರಿ, ಮಾ. 29: ಕೋಟಿ ವಿದ್ಯೆಗಿಂತ, ಮೇಟಿ ವಿದ್ಯೆಯೇ ಮೇಲು. ವಿದ್ಯೆಗಿಂತ ಅನುಭವ ಮುಖ್ಯ ಎಂಬುದನ್ನ ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕಾಗಿದೆ ಎಂದು ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೆಂದ್ರಪ್ಪ ಅವರು ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಹೂವಿನ ಹಡಗಲಿ ಕ್ಷೇತ್ರದಲ್ಲಿ ಎರಡನೆ ದಿನ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು. ಕುರುವತ್ತಿ, ಮೈಲಾರ, ಹೊಳಲು, ಹ್ಯಾರಡ, ದಾಸನಹಳ್ಳಿ, ಕತ್ತೇಬೆನ್ನೂರು, ಮಕರಬ್ಬಿ, ಬೀರಬ್ಬಿ, ಮಾನ್ಯರಮಸಲವಾಡ, ನಾಗತ್ತಿಬಸಾಪುರ, ಸೋಗಿ, ನಂದಿಹಳ್ಳಿ, ಹೊಳಗುಂದಿ, ಉತ್ತಂಗಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಅನಂತರ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಾಯಕರುಗಳು ನನ್ನನ್ನು ಅವಿದ್ಯಾವಂತ ಎಂದು ಹೀಯಾಳಿಸುತ್ತಿದ್ದಾರೆ. ದೇಶವನ್ನು ಅಭಿವೃದ್ದಿಯೆಡೆಗೆ ಮುನ್ನಡೆಸಿರುವ ಹಲವು ನಾಯಕರುಗಳು ಅವಿದ್ಯಾವಂತರೇ. ಜನಪ್ರಿಯ ನಾಣ್ಣುಡಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎನ್ನುವಂತೆ, ನಾನು ನಮ್ಮ ಭಾಗದ ಜನರ ಜೀವನಾಡಿಯಾಗಿರುವ ವ್ಯವಸಾಯದಲ್ಲಿ ಅನುಭವವಿದೆ ಎಂದರು.
ಅಲ್ಲದೆ, ಜನಸಾಮಾನ್ಯರ ನೋವುಗಳನ್ನ ಬಹಳ ಹತ್ತಿರದಿಂದ ನೋಡಿದ್ದೇನೆ. ನನ್ನ ರಾಜಕೀಯ ಅನುಭವದಲ್ಲಿ ನಾನು ನೋಡಿರುವಂತಹ ಹಾಗೂ ಸ್ಪಂದಿಸಿರುವಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಓದೋಗಂಗಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಮೃತ್ಯಂಜಯ ಜಿನಗ, ಮಾಜಿ ಶಾಸಕ ಚಂದ್ರಾನಾಯ್ಕಾ, ಮಹೇಂದ್ರ ಜ್ಯೋತಿ, ಕೋಟ್ರೇಶ್, ವೈ.ಬಿ.ಪಾಟೀಲ್, ಲಿಂಗಪ್ಪಭೋವಿ, ಕಾಶಿನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.







