ನೌಕರನ ಕೊಲೆ ಮಾಡಿದ್ದ ಸರವಣ ಭವನ ಮಾಲಕನ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಮಾ.29: ನೌಕರನ ಪತ್ನಿಯನ್ನು ಮದುವೆಯಾಗಬೇಕೆಂಬ ಉದ್ದೇಶದಿಂದ ನೌಕರನನ್ನು ಕೊಲೆ ಮಾಡಿದ್ದ ಚೆನ್ನೈಯ ಸರವಣ ಭವನ ಹೋಟೆಲ್‌ನ ಮಾಲಕ ಪಿ ರಾಜಗೋಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ತನ್ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಶಾಂತಕುಮಾರ್ ಎಂಬಾತನ ಪತ್ನಿಯನ್ನು ಮೋಹಿಸಿದ್ದ ರಾಜಗೋಪಾಲ್ ಆಕೆಯನ್ನು ಮದುವೆಯಾಗಬಯಸಿದ್ದ. ಈ ಹಿನ್ನೆಲೆಯಲ್ಲಿ 2001ರ ಅಕ್ಟೋಬರ್‌ನಲ್ಲಿ ಚೆನ್ನೈಯ ವೆಲ್ಲಚೇರಿ ಎಂಬಲ್ಲಿ ವಾಸವಿದ್ದ ಶಾಂತಕುಮಾರ್‌ನನ್ನು ಬಾಡಿಗೆ ಹಂತಕರ ಮೂಲಕ ಅಪಹರಿಸಿದ್ದ. ಬಳಿಕ ಶಾಂತಕುಮಾರನ ಮೃತದೇಹ ಕೊಡೈ ಬೆಟ್ಟದಲ್ಲಿ ಪತ್ತೆಯಾಗಿತ್ತು.
ತನಿಖೆ ನಡೆಸಿದ್ದ ಪೊಲೀಸರು ರಾಜಗೋಪಾಲ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈತನಿಗೆ ಸೆಷನ್ಸ್ ಕೋರ್ಟ್ 10 ವರ್ಷದ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಅಲ್ಲಿ ಈತನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಈ ಮಧ್ಯೆ, 2009ರಲ್ಲಿ ಈತನಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರುಗೊಳಿಸಿದ್ದು ಆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.
ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ರಾಜಗೋಪಾಲ್ ವಕೀಲರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿಯಿತಲ್ಲದೆ, ಜುಲೈ 7ರ ಒಳಗೆ ಶರಣಾಗುವಂತೆ ರಾಜಗೋಪಾಲ್‌ಗೆ ಸೂಚಿಸಿತು.







