ಕೆಆರ್ ಮಾರುಕಟ್ಟೆ: 2021 ಅನಧಿಕೃತ ಅಂಗಡಿಗಳ ಎತ್ತಗಂಡಿ

ಬೆಂಗಳೂರು, ಮಾ.29: ರಾಜಧಾನಿ ಬೆಂಗಳೂರಿನ ಪ್ರಸಿದ್ದ ಕೃಷ್ಣರಾಜ(ಕೆಆರ್) ಮಾರುಕಟ್ಟೆಯಲ್ಲಿ ಪಾದಚಾರಿ ರಸ್ತೆ, ವಾಹನ ನಿಲ್ದಾಣ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಬರೋಬ್ಬರಿ 2021 ಮಳಿಗೆಗಳನ್ನು ಶುಕ್ರವಾರ ನೆಲಸಮಗೊಳಿಸಿದರು.
ಜನಸಂದಣಿ ಪ್ರದೇಶವಾಗಿರುವ ಕೆ.ಆರ್. ಮಾರುಕಟ್ಟೆಯಲ್ಲಿ ಪಾದಚಾರಿ ರಸ್ತೆ ಸೇರಿ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮಳಿಗೆ, ಅಂಗಡಿಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಮಾಡಲಾಯಿತು.
ಮೈಸೂರು ರಸ್ತೆಯ ಮೇಲ್ಸೇತುವೆ ಕೆಳಗೆ ಮತ್ತು ಪಾದಚಾರಿ ಮಾರ್ಗಗಳು, ಪಾರ್ಕಿಂಗ್ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡು ಬಹಳಷ್ಟು ಮಂದಿ ವ್ಯಾಪಾರ ಮಾಡುತ್ತಿದ್ದರು. ಈ ಸಂಬಂಧ ಅದನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ ಆದೇಶದ ಅನ್ವಯ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಕೆಆರ್ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ತುರ್ತು ಒತ್ತುವರಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು.
ಶುಕ್ರವಾರ ಕೆಆರ್ ಮಾರುಕಟ್ಟೆಯ ಒಟ್ಟು 2021 ಮಳಿಗೆಗಳು, ಮಳಿಗೆಗಳ ಮುಂಭಾಗದಲ್ಲಿ ಖಾಯಂ ಆಗಿ ಅಳವಡಿಸಿದ್ದ ಟೇಬಲ್‌ಗಳು, ಅನಧಿಕೃತ ಫಲಕಗಳು ತೆರವುಗೊಳಿಸಿದ್ದು, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ ಸುತ್ತಮುತ್ತಲಿರುವ ಪ್ರದೇಶದಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದವರನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 48 ಟ್ರಾಕ್ಟರ್‌ಗಳು, 15 ಲಾರಿಗಳು, 8 ಕಾಂಪ್ಯಾಕ್ಟರ್‌ಗಳು, 8 ಜೆಸಿಬಿಗಳು ಹಾಗೂ 390 ಸಿಬ್ಬಂದಿಗಳು, 30 ಮಾರ್ಶಲ್‌ಗಳು, ಸಂಚಾರ ಪೊಲೀಸರು ಪಾಲ್ಗೊಂಡಿದ್ದರು.
ಇದರಲ್ಲಿ 240ಕ್ಕೂ ಹೆಚ್ಚು ಲೋಡ್‌ಗಳಷ್ಟು ಅನಧಿಕೃತ ವಸ್ತುಗಳನ್ನು ಬೇರೆಡೆ ಸಾಗಿಸಲಾಯಿತು. ಜೊತೆಗೆ, ಕಾರ್ಯಾಚರಣೆ ವೇಳೆ ಮಾರುಕಟ್ಟೆಯ ಆವರಣದಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಕೂಡ ತೆರವುಗೊಳಿಸಲಾಯಿತು.
ಕೆ.ಆರ್.ಮಾರುಕಟ್ಟೆಯ ಒಳಭಾಗದಲ್ಲಿ ಶೇ. 50ರಷ್ಟು ಮತ್ತು ಹೊರಭಾಗದಲ್ಲಿ ಶೇ. 60ರಷ್ಟು ಜಾಗ ಒತ್ತುವರಿ ಮಾಡಿಕೊಂಡಿದ್ದರು. ಮಾರುಕಟ್ಟೆ ಹೊರಭಾಗದಲ್ಲಿ ಬಿಬಿಎಂಪಿ ಹಾಗೂ ಖಾಸಗಿ ವಾಹನಗಳು ಬಂದು ಹೋದರೂ ತೊಂದರೆಯಾಗುತ್ತಿತ್ತು. ಕಾಂಪ್ಲೆಕ್ಸ್‌ನ ನೆಲಭಾಗದಲ್ಲಿ ಪಾರ್ಕಿಂಗ್ ಸ್ಥಳ ಒತ್ತುವರಿಯಾಗಿತ್ತು. ಹೈಕೋರ್ಟ್‌ನ ಆದೇಶದ ಹಿನ್ನೆಲೆ ಒತ್ತುವರಿ ತೆರವುಗೊಳಿಸಲಾಗಿದೆ
-ಸರ್ರಾಜ್ ಖಾನ್, ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ
ಮಾರುಕಟ್ಟೆ ಖಾಲಿ
ಪ್ರತಿದಿನ ಜನಸಂದಣಿಯಿಂದ ತುಂಬಿರುತ್ತಿದ್ದ ಕೆ.ಆರ್. ಮಾರುಕಟ್ಟೆ ಒತ್ತುವರಿ ತೆರವು ಹಿನ್ನೆಲೆ ಖಾಲಿಯಾಗಿದ್ದು, ಮಾರುಕಟ್ಟೆ ಒಳಭಾಗದಲ್ಲಿ ವ್ಯಾಪಾರ ನಡೆಯುತ್ತಿತ್ತು. ಹೊರಭಾಗದಲ್ಲಿ ಟ್ರ್ಯಾಕ್ಟರ್, ಜೆಸಿಬಿ, ಲಾರಿ ಶಬ್ದವೇ ಹೆಚ್ಚು ಕೇಳಿಬರುತ್ತಿತ್ತು.






.jpg)
.jpg)

