ಮತದಾನಕ್ಕೆ ಅವಕಾಶ ಸಿಗಲಿ
ಮಾನ್ಯರೇ,
ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿ ನೀತಿ ಸಂಹಿತೆ ಜಾರಿಯಲ್ಲಿದೆ. ಮತದಾನ ಪ್ರತಿಯೊಬ್ಬರ ಹಕ್ಕು, ಅದನ್ನು ಚಲಾಯಿಸಲೇಬೇಕೆಂದು ಜಾಹೀರಾತುಗಳ ಮುಖಾಂತರ ಸರಕಾರವು ಮತದಾನಕ್ಕೆ ಪ್ರೋತ್ಸಾಹ ನೀಡುತ್ತದೆ. ಆದರೆ ಭಾರತೀಯ ರೈಲ್ವೆಯಲ್ಲಿ ಹದಿಮೂರು ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದು ಮತದಾನದ ದಿನಾಂಕದಂದು ಕೇವಲ ಕಾರ್ಯಾಗಾರ ಮತ್ತು ಕಚೇರಿಯ ನೌಕರರಿಗೆ ಮಾತ್ರ ರಜೆಯನ್ನು ನೀಡುತ್ತಾರೆ. ಸುಮಾರು ಎಂಟರಿಂದ ಹತ್ತು ಲಕ್ಷ ಜನರು ಓಪನ್ ಲೈನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇವರಿಗೆ ಮತದಾನದ ದಿನ ರಜೆ ನೀಡುವುದಿಲ್ಲ. ಅಲ್ಲದೆ ಅಂಚೆಯಲ್ಲಿ ಕೂಡ ಮತದಾನ ಮಾಡಲು ಯಾವುದೇ ಅನುಕೂಲ ಮಾಡಿಕೊಟ್ಟಿರುವುದಿಲ್ಲ. ಇದರಿಂದ ಹಲವಾರು ರೈಲ್ವೆ ನೌಕರರು ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.
ಭಾರತೀಯ ರೈಲ್ವೆಯು ಸಾರ್ವಜನಿಕ ಸೇವಾವಲಯದಡಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರಿಗೂ ರಜೆ ನೀಡಲು ಸಾಧ್ಯವಿಲ್ಲ. ಆದರೆ ಅಂಚೆ ಮೂಲಕ ಅಥವಾ ಪ್ರತ್ಯೇಕವಾದ ಮತದಾನದ ವ್ಯವಸ್ಥೆಯ ಮೂಲಕ ಎಲ್ಲರಿಗೂ ಮತ ಚಲಾಯಿಸಲು ಅವಕಾಶವನ್ನು ಮಾಡಿಕೊಟ್ಟರೆ ಅವರಿಗೂ ಮತದಾನದ ಹಕ್ಕು ಸಿಕ್ಕಂತಾಗುತ್ತದೆಯಲ್ಲವೇ?





