ಬಿಜೆಪಿಯವರೇ ಆರಂಭಿಸಿದ 'ಗೋಬ್ಯಾಕ್ ಶೋಭಾ' ಚಳವಳಿ ವ್ಯರ್ಥವಾಗದು: ಪ್ರಮೋದ್ ಮಧ್ವರಾಜ್

ತರೀಕೆರೆ, ಮಾ.29: ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸಮ್ಮಿಲನದಿಂದ ಈ ಬಾರಿ ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ನನ್ನನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕೇಳಿಕೊಂಡ ಮೇರೆಗೆ ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸಲಹೆ ಪಡೆದು ಅಂತಿಮಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಂದು ಉಡುಪಿ ಕ್ಷೇತ್ರದ ಸ್ಫರ್ಧಿ ಪ್ರಮೋದ್ ಮಧ್ವರಾಜ್ ಹೇಳಿದರು.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಶಾಸಕನಾಗಿದ್ದಾಗ ಉಡುಪಿ ಕ್ಷೇತ್ರಕ್ಕೆ ಸರಿಸುಮಾರು 2000 ಕೋಟಿ ಅನುದಾನ ತಂದಿದ್ದೇನೆ. ಅನುದಾನ ಮಾತ್ರವಲ್ಲದೆ ಉಡುಪಿ ಕ್ಷೇತ್ರದಲ್ಲಿ 65 ಜನಸಂಪರ್ಕ ಸಭೆ ನಡೆಸುವುದರ ಮೂಲಕ 35 ಇಲಾಖೆ ಅಧಿಕಾರಿಗಳನ್ನು ಜನಸಾಮಾನ್ಯರ ಪ್ರತಿನಿತ್ಯ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವಂತೆ ಮಾಡಿದ್ದೇನೆ. ಇದರ ಫಲವಾಗಿ ಅಧಿಕಾರಿಗಳು ಪ್ರತೀ ವ್ಯಕ್ತಿಯ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸುವಂತೆ ಗಮನ ಹರಿಸಲು ಸಾಧ್ಯವಾಗಿದೆ. ಸಂಸದನಾಗಿ ಆಯ್ಕೆಗೊಂಡಲ್ಲಿ ಇದೇ ಮಾದರಿಯಲ್ಲಿ ಜನರ ಸಮಸ್ಯೆ ಆಲಿಸುತ್ತೇನೆಂದು ಅವರು ಹೇಳಿದರು.
ಕಳೆದ ಐದು ವರ್ಷಗಳಿಂದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇಡೀ ಕ್ಷೇತ್ರದಲ್ಲಿ ಕೇಂದ್ರ ಸರಕಾರದಿಂದ ಅನುದಾನ ತರಲಾಗದೆ ಶಿವಮೊಗ್ಗ, ಮೈಸೂರು, ಕೊಡುಗು, ಮಂಗಳೂರು ವಿಭಾಗದಲ್ಲಿ ಇವು ತಮ್ಮ ಸ್ವ ಕ್ಷೇತ್ರವೆಂದು ಪ್ರಚಾರ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು 5 ವರ್ಷಗಳ ಕಾಲ ಕಡೆಗಣಿಸಿದ್ದಾರೆ. ಇದೀಗ ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖರುಗಳೇ ಸೇರಿಕೊಂಡು 'ಗೋ ಬ್ಯಾಕ್ ಶೋಭಾ' ಚಳವಳಿ ನಡೆಸಿದ್ದಾರೆ. ಶೋಭಾ ಕರದ್ಲಾಂಜೆ ಉಡುಪಿಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಬೆಂಗಳೂರು ಮೂಲ ನಿವಾಸದ ವಿಳಾಸ ನೀಡಿದ್ದಾರೆ. ಕ್ಷೇತ್ರದ ಮತದಾರರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಒಂದೇ ಒಂದು ಕನಿಷ್ಠ ಸೌಜನ್ಯ ಇವರಿಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಹಾಗಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಈ ಬಾರಿ ಮತದಾರರು ಶೋಭಾ ಕರಂದ್ಲಾಜೆಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಬಿಜೆಪಿಯವರು ಆರಂಭಿಸಿದ ಶೋಭಾ ಕರಂದ್ಲಾಜೆ ಗೋ ಬ್ಯಾಕ್ ಚಳವಳಿ ವ್ಯರ್ಥವಾಗುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ತರೀಕೆರೆ ಕ್ಷೇತ್ರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಮತ ನೀಡಿ ಮೈತ್ರಿ ಪಕ್ಷದ ಅಭ್ಯರ್ಥಿಯಾದ ತನನ್ನು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಶಾಸಕ ಭೋಜೆಗೌಡ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಡಾ.ವಿಜಯ್ ಕುಮಾರ್, ಜಿ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಜೆ.ಡಿ.ಎಸ್ ಮುಖಂಡ ದೇವರಾಜ್, ಮಾಜಿ ಶಾಸಕರುಗಳಾದ ಎಸ್.ಎಂ.ನಾಗರಾಜ್, ಟಿ.ಹೆಚ್.ಶಿವಶಂಕರಪ್ಪ, ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಮುಖಂಡರುಗಳಾದ ಟಿ.ಎನ್ ಗೋಪಿನಾಥ್, ಕೆ.ಆರ್ ದ್ರುವಕುಮಾರ್, ರವಿ ಕಿಶೋರ್, ನಂದ ಕುಮಾರ್, ಕೆಂಪೇಗೌಡ, ರಾಮಣ್ಣ, ನರೇಂದ್ರ, ಮೆಡಿಕಲ್ ಶಿವನಂದ್ ಹಾಗೂ ಇತರರು ಭಾಗವಹಿಸಿದ್ದರು.







