ಮೈತ್ರಿ ಪಕ್ಷಗಳ ನೇತೃತ್ವದಲ್ಲಿ ಮಾ.31 ರಂದು ಬೃಹತ್ ‘ಪರಿವರ್ತನಾ ಸಮಾವೇಶ’

ಫೈಲ್ ಚಿತ್ರ
ಬೆಂಗಳೂರು, ಮಾ. 30: ‘ಬಲಿಷ್ಠ ಕರ್ನಾಟಕದಿಂದಲೇ ಬಲಿಷ್ಠ ಭಾರತ’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನೇತೃತ್ವದಲ್ಲಿ ನಾಳೆ(ಮಾ.31) ಸಂಜೆ 4ಗಂಟೆಗೆ ನಗರದ ಹೊರವಲಯದ ಮಾದಾವರದ ಬಿಐಇಸಿ ಮೈದಾನದಲ್ಲಿ ‘ಪರಿವರ್ತನಾ ಸಮಾವೇಶ’ವನ್ನು ಏರ್ಪಡಿಸಲಾಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರಕ್ಕೆ ಪರಿವರ್ತನಾ ಸಮಾವೇಶದ ಮೂಲಕ ಚಾಲನೆ ನೀಡಲಿದ್ದು, ಉಭಯ ಪಕ್ಷಗಳ ಸುಮಾರು 5 ಲಕ್ಷ ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ದೇಶಕ್ಕೆ ಸಂದೇಶ ರವಾನೆ: ‘ಬಲಿಷ್ಠ ರಾಜ್ಯಗಳಿಂದಲೇ ಬಲಿಷ್ಠ ದೇಶ’ ಎಂಬ ಘೋಷಣೆಯಂತೆ ನಾಳೆ ನಡೆಯಲಿರುವ ಪರಿವರ್ತನಾ ಸಮಾವೇಶದ ಮೂಲಕ ಇಡೀ ದೇಶಕ್ಕೆ ಒಂದು ಸಂದೇಶ ರವಾನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಹೊರಹಾಕಲು ಈ ಸಮಾವೇಶದ ಮೂಲಕ ಸಾಧ್ಯವಾಗಲಿದೆ. ಕಾಂಗ್ರೆಸ್-ಜೆಡಿಎಸ್ ಮುಖಂಡರ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
‘ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಸ್ಪರ್ಧೆ ಸಂಬಂಧ ಮಾಜಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಬಂದು ಚರ್ಚಿಸಿದ್ದು, ನಾಳೆ ಸಂಜೆ ಒಳಗಾಗಿ ಈ ಬಗ್ಗೆ ತೀರ್ಮಾನ ಮಾಡಲಾಗುವುದು. ಶಾಮನೂರು ಶಿವಶಂಕರಪ್ಪ ಅಥವಾ ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ’
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ







