ಮೋದಿ ಅಲೆಯಿಂದ ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು: ಶ್ರೀರಾಮುಲು

ಬಳ್ಳಾರಿ, ಮಾ.30: ರಾಜ್ಯ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಲೆ ಇದೆ. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ತಿಳಿಸಿದ್ದಾರೆ.
ಶನಿವಾರ ಬಳ್ಳಾರಿಯ ಕಪ್ಪಗಲ್ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ದೇವೇಂದ್ರಪ್ಪ ಅವರ ಪರವಾಗಿ ಪ್ರಚಾರ ನಡೆಸಿದ ಅವರು, ಬಳ್ಳಾರಿ ಜನತೆ ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ ತುಂಬಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹಾಸನ, ಮಂಡ್ಯ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಷ್ಟೆ ಮುಖ್ಯವಾಗಿದೆ. ಜೆಡಿಎಸ್, ಕಾಂಗ್ರೆಸ್ ಹೆಸರಿಗಷ್ಟೆ ಮೈತ್ರಿಯಾಗಿದೆ. ಹೀಗಾಗಿ ಯುವಜನತೆ ಪ್ರಧಾನಿ ನರೇಂದ್ರ ಮೋದಿಯ ಕಡೆಗೆ ಹೆಚ್ಚು ಒಲವನ್ನು ಹೊಂದಿರುವುದರ ಪರಿಣಾಮ ಬಿಜೆಪಿಗೆ ನಿಚ್ಚಳ ಬಹುಮತ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ವೇಳೆ ಸರಿಯಾದ ದಾಖಲಾತಿ ನೀಡಿರಲಿಲ್ಲ. ಹೀಗಾಗಿ ಅವರ ನಾಮಪತ್ರ ತಿರಸ್ಕಾರಗೊಳ್ಳಬೇಕಿತ್ತು. ಆದರೂ ಪುರಸ್ಕೃತಗೊಂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ, ಮಾಜಿ ಶಾಸಕ ಸುರೇಶ್ ಬಾಬು, ಹಿರಿಯ ಮುಖಂಡ ರಾಮಲಿಂಗಪ್ಪ, ಭೀಮಾರೆಡ್ಡಿ, ತಿಮ್ಮಾರೆಡ್ಡಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿದ್ದರು.







