ಕನ್ನಡದ ಚಹರೆಗಳ ಮರುಶೋಧವೇ ಕನ್ನಡ ಉಳಿಸುವ ಕಾಯಕ: ಡಾ.ನಟರಾಜ ಬೂದಾಳ್
ಉಡುಪಿ, ಮಾ.30: ನಮ್ಮದಲ್ಲದ ಚಹರೆಗಳನ್ನು ಹೊತ್ತು ಬಾಳುತ್ತಿರುವ ಕನ್ನಡವು ನಿಜವಾದ ಕನ್ನಡವಾಗಬೇಕಾದರೆ, ತನ್ನ ಒಡಲಾಳದ ಸಹಜ ಚಹರೆಗಳನ್ನು ಮತ್ತೆ ಮರುಜೋಡಿಸಿಕೊಂಡು ತನ್ನನ್ನೇ ತಾನು ಮತ್ತೆ ಕಂಡು ಕೊಳ್ಳಬೇಕಾಗಿದೆ ಎಂದು ನಾಡಿನ ಖ್ಯಾತ ಸಂಸ್ಕೃತಿ ಚಿಂತಕ ಡಾ. ನಟರಾಜ ಎಸ್. ಬೂದಾಳ್ ಅಭಿಪ್ರಾಯ ಪಟ್ಟಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಆಯೋಜಿಸಿದ ‘ಹತ್ರಾವಧಿ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನ್ನಡ ಕರಾವಳಿಯ ಜಲ ಮತ್ತು ಫಲ ಸಂಪ್ರದಾಯವನ್ನು ನೆನಕೆ ಮಾಡುವ ಗುರುತುಗಳೊಂದಿಗೆ ಅಣಿಗೊಂಡ ವೇದಿಕೆಯಲ್ಲಿ ಇರಿಸಲಾದ ಕನ್ನಡ ಮೀಮಾಂಸೆಯ ರೂಪಕದಂತಿರುವ ಮಾತಾಡುವ ಮರ ಎಂದೇ ಖ್ಯಾತವಾದ ಆಲದ ಸಸಿಗೆ ನೀರಿಕ್ಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಈ ಸಂದರ್ಭದಲ್ಲಿ ಕನ್ನಡ ಮೀಮಾಂಸೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಆಯೋಜಿಸಲಾದ ಗೋಷ್ಠಿಗಳಲ್ಲಿ ಕೃಷಿ, ಬಹುತ್ವ ಮತ್ತು ಬದುಕು ಕುರಿತು ಮಾತನಾಡಿ ಡಾ. ನರೇಂದ್ರ ರೈ ದೇರ್ಲ, ಕೃಷಿ ಎಂದರೆ ಹೊಟ್ಟೆಯ ಹಸಿವಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ಅದೊಂದು ಕೂಡು ಸಂಬಂಧದ ಸಾಂಸ್ಕೃತಿಕ ಆವರಣ ಎಂದರು.
ನೆಲಮೂಲ ನಾಗಾರಾಧನೆ ಕುರಿತು ಮಾತನಾಡಿದ ಡಾ. ಪೂವಪ್ಪ ಕಣಿಯೂರು, ಕನ್ನಡ ಕರಾವಳಿಯ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ನಾಗ ನಮ್ಮ ಆರಾಧನೆಯ ಕೇಂದ್ರದಲ್ಲಿದ್ದರೂ ನಾವು ಮಾತ್ರ ಹೊರಗಿದ್ದೇವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಡಾ.ಸುರೇಶ್ ರೈ ಕೆ. ಉಪಸ್ಥಿತರಿದ್ದರು.
ಕನ್ನಡ ವಿಭಾಗ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳಾಡಿದರು. ಪ್ರೊ.ರಾಧಾಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಳೆದ 10 ವರ್ಷಗಳಲ್ಲಿ ಕನ್ನಡ ವಿಭಾಗದಿಂದ ರ್ಯಾಂಕ್ ಗಳಿಸಿದ 12 ಮಂದಿ ಸಾಧಕರನ್ನು ಗೌರವಿಸಲಾಯಿತು.







