ಯಾವ ಚಿಕಿತ್ಸೆ ನೀಡಬೇಕೆಂಬ ಆಯ್ಕೆ ರೋಗಿಯ ಹಕ್ಕು: ಶಾನುಭಾಗ್

ಉಡುಪಿ, ಮಾ. 30: ಪ್ರತಿಯೊಬ್ಬ ರೋಗಿಗೂ ತನ್ನ ರೋಗದ ಬಗ್ಗೆ ತಿಳಿದು ಕೊಳ್ಳುವ, ಯಾವ ರೋಗಕ್ಕೆ ಯಾವ ಚಿಕಿತ್ಸೆ ನೀಡಬೇಕೆಂಬ ಆಯ್ಕೆ ಮಾಡುವ ಮತ್ತು ಯಾವುದೇ ಚಿಕಿತ್ಸೆ ಬೇಡ ಎಂಬುದಾಗಿ ತಿರಸ್ಕರಿಸುವ ಹಕ್ಕುಗಳಿವೆ. ಯಾವುದೇ ರೋಗಿಗೂ ಒತ್ತಾಯ ಪೂರ್ವಕವಾಗಿ ಚಿಕಿತ್ಸೆ ನೀಡಲು ಅವಕಾಶವೇ ಇಲ್ಲ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದ್ದಾರೆ.
ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕದ ವತಿಯಿಂದ ಉಡುಪಿ ಜಾಮೀಯ ಮಸೀದಿಯಲ್ಲಿ ಶನಿವಾರ ಆಯೋಜಿಸಲಾದ ‘ಆರೋಗ್ಯವೇ ಭಾಗ್ಯ’ ಜನಜಾಗೃತಿ ಕಾರ್ಯಕ್ರಮದಲ್ಲಿ ‘ಆರೋಗ್ಯ ರಂಗದ ವ್ಯಾಪಾರೀಕರಣ, ಬಳಕೆದಾರರ ರಕ್ಷಣಾ ಕಾಯಿದೆ ಮತ್ತು ರೋಗಿಗಳ ಹಕ್ಕುಗಳು’ ಕುರಿತು ಅವರು ಮಾತನಾಡುತಿದ್ದರು.
ಭಾರತದ ವೈದ್ಯಕೀಯ ಶಾಸ್ತ್ರದಲ್ಲಿ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕೆಂಬ ನಿಯಮ ಇದೆ. ಆದರೆ ಆಸ್ಪತ್ರೆಗಳು ಇಂದು ವಯೋವೃದ್ಧರನ್ನು ಚಿಕಿತ್ಸೆ ಹೆಸರಿನಲ್ಲಿ ಒಳರೋಗಿಗಳಾಗಿ ದಾಖಲಿಸಿ ಹಣ ಗಳಿಸುವ ಕೆಲಸ ಮಾಡುತ್ತಿವೆ. ವಯೋ ವೃದ್ಧತೆ ಎಂಬುದು ಜೀವನದ ಭಾಗವೇ ಹೊರತು ರೋಗ ಅಲ್ಲ. ಸಾಯುವ ವೃದ್ಧರನ್ನು ಯಾವುದೇ ಚಿಕಿತ್ಸೆಯಿಂದಲೂ ಬದುಕಿಸಲು ಸಾಧ್ಯವೇ ಇಲ್ಲ ಎಂದರು.
ಹಿಂದೆ ಯಾವುದೇ ಹಣ ಗಳಿಸುವ ಉದ್ದೇಶ ಹೊಂದಿರದ ವೈದ್ಯಕೀಯ ಕ್ಷೇತ್ರವು ಸೇವೆಯಾಗಿತ್ತು. ಆದರೆ ಇಂದು ಅದು ವ್ಯಾಪಾರೀಕರಣವಾಗಿರುವುದು ದುರಂತ. ಆದುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಅಥವಾ ಅವರ ಮನೆಯವರು ಚಿಕಿತ್ಸೆ ಕುರಿತು ವೈದ್ಯರನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು ಎಂದು ಅವರು ಹೇಳಿದರು.
ಮಾನಸಿಕ ತಜ್ಞ ಡಾ.ವಿ.ಪಿ.ಭಂಡಾರಿ ‘ಮಾನಸಿಕ ಒತ್ತಡ ನಿವಾರಣೆಯ ವಿಧಾನಗಳು’ ಕುರಿತು ಮಾತನಾಡಿದರು. ಮಸೀದಿಯ ಅಧ್ಯಕ್ಷ ಸೈಯ್ಯದ್ ಯಾಸೀನ್ ಉಪಸ್ಥಿತರಿದ್ದರು. ವೈದ್ಯ ಡಾ.ಮುಹಮ್ಮದ್ ರಫೀಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದುರ್ರಶೀದ್ ವಂದಿಸಿದರು. ಸದಸ್ಯ ಮುಹಮ್ಮದ್ ಮೌಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







