ಬಿಜೆಪಿಯಿಂದ ಜಾತಿ ರಾಜಕಾರಣ: ಹರೀಶ್ ಕುಮಾರ್ ಆರೋಪ
ಮಂಗಳೂರು, ಮಾ.30: ಕಾಂಗ್ರೆಸ್ ಚುನಾವಣೆ ಪ್ರಚಾರದಿಂದ ಆತ್ಮಸ್ಥೈರ್ಯ ಕಳೆದುಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಲ್ಲವ ಸಮುದಾಯವರನ್ನು ಕೆಪಿಸಿಸಿ ಅಧ್ಯಕ್ಷ, ಸಿಎಂ, ಸಂಸದರು, ಕೇಂದ್ರ ಸಚಿವರನ್ನಾಗಿಸಿದೆ. ಬಿಜೆಪಿ ಬಿಲ್ಲವ ಸಮುದಾಯದ ಯಾರನ್ನ್ನು ಸಿಎಂ, ಕೇಂದ್ರ ಸಚಿವರನ್ನಾಗಿ ಮಾಡಿದೆ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇಬ್ಬರು ಬಿಲ್ಲವ ಸಮುದಾಯಕ್ಕೆ ಅವಕಾಶ ನೀಡಿದೆ, ಆದರೆ ಬಿಜೆಪಿ ಎಷ್ಟು ಟಿಕೇಟ್ ನೀಡಿದೆ ಎಂದು ಹೇಳಲಿ ಎಂದು ಸವಾಲೆಸೆದ ಅವರು, ಬಿಜೆಪಿ ನಾಯಕರು ಬಿಲ್ಲವ ಸಮಾಜದ ಯುವಕರನ್ನು ಬಳಸಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಪಕ್ಷವು ಸಮುದಾಯವೊಂದರ ಲೆಟರ್‌ಹೆಡ್, ಅಧ್ಯಕ್ಷರೊಬ್ಬರ ಸಹಿ ಪೋರ್ಜರಿ ಮಾಡಿ ಮತಯಾಚನೆ ಮಾಡುತ್ತಿದ್ದು, ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಲೆಟರ್‌ಹೆಡ್ ಹರಿದಾಡುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರವಿಲ್ಲ ಎಂದರು.
ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಬಿಜೆಪಿ ನಾಯಕರು ಅವರ ಪಕ್ಷದ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಬಗ್ಗೆ ಯೋಚಿಸಲಿ. ಪೂಜಾರಿಯವರು ಒಂದು ಕಡೆ ಹೊಗಳಿದೆ, ಇನ್ನೊಂದು ಕಡೆ ತೆಗಳುತ್ತಾರೆ. ಪೂಜಾರಿಯವರು ವಯೋಸಹಜವಾಗಿ ನಿವೃತ್ತಿ ಅಂಚಿನಲ್ಲಿದ್ದು, ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಕಾಂಗ್ರೆಸ್ ಪಕ್ಷ ಈಗಾಗಲೇ ಬೂತ್, ವಲಯ ಮಟ್ಟದ ಸಮಾವೇಶ ಹಮ್ಮಿಕೊಂಡು ಚುನಾವಣೆ ಸಿದ್ಧತೆ ನಡೆಸಿದೆ. ಎ.1ರಿಂದ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹುಟ್ಟಿದ ಪ್ರತಿಷ್ಠಿತ ವಿಜಯಾ ಬ್ಯಾಂಕ್ ತೀವ್ರ ಹೋರಾಟ ಮಧ್ಯೆಯೂ ಬ್ಯಾಂಕ್ ಆ್ ಬರೋಡಾದ ಜತೆ ವಿಲೀನಗೊಳ್ಳಲಿದ್ದು, ಮಾ.31ರಂದು ವಿಜಯಾ ಬ್ಯಾಂಕ್ ಹೆಸರಿನಲ್ಲಿ ಕಾರ್ಯಸ್ಥಗಿತಗೊಳಿಸಲಿದೆ. ಇದು ನಿಜಕ್ಕೂ ಬೇಸರ ಸಂಗತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಎ.1ರಂದು ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿ ಸಮೀಪವಿರುವ ವಿಜಯಾಬ್ಯಾಂಕ್ ಕಚೇರಿಯಲ್ಲಿ ಕರಾಳದಿನ ಹಮ್ಮಿಕೊಳ್ಳಲಾಗುವುದು. ಒಂದು ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿಜಯಾ ಬ್ಯಾಂಕ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ನೀರಜ್‌ಪಾಲ್, ನಝೀರ್ ಬಜಾಲ್, ಪ್ರೇಮ್ ಬಲ್ಲಾಳ್‌ಬಾಗ್, ಮಾಧವ ಮಾವೆ, ಗಣೇಶ್ ಪೂಜಾರಿ, ಆರ್ೀ ಉಪಸ್ಥಿತರಿದ್ದರು.
ಪ್ರಚಾರಕ್ಕೆ ರಾಹುಲ್ ಭೇಟಿ ಸಾಧ್ಯತೆ
ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡುವ ಸಾಧ್ಯತೆ ಇದೆ. ಇನ್ನೂ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಇದು ಮಾತ್ರವಲ್ಲದೆ ಕೇಂದ್ರ ನಾಯಕರು, ಸೆಲೆಬ್ರಿಟಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದಾರೆ. ಎ1ರಂದು ಡಿಕೆಶಿ ಪುತ್ತೂರು, ಬೆಳ್ತಂಗಡಿಯಲ್ಲಿ ಪ್ರಚಾರ ನಡೆಸಿದರೆ, ಎ2.ರಂದು ದಿನೇಶ್ ಗುಂಡುರಾವ್ ಸುಳ್ಯಕ್ಕೆ ಆಗಮಿಸಲಿದ್ದಾರೆ ಎಂದರು.







