ಮಂಡ್ಯ ಲೋಕಸಭಾ ಕ್ಷೇತ್ರ: ಕ್ರಮಸಂಖ್ಯೆ ಬಗ್ಗೆ ಅಭ್ಯರ್ಥಿಗಳಿಂದ ಆಕ್ಷೇಪ

ಮಂಡ್ಯ, ಮಾ.30: ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನೀಡಿರುವ ಕ್ರಮಸಂಖ್ಯೆ ಬಗ್ಗೆ ಆಕ್ಷೇಪ ಕೇಳಿ ಬಂದಿದ್ದು, ಯಾವ ಆಧಾರದ ಮೇಲೆ ಸಂಖ್ಯೆ ನೀಡಲಾಗಿದೆ ಎಂಬುದು ಗೊಂದಲವಾಗಿದೆ.
ಸ್ಪೆಲಿಂಗ್ ಮಿಸ್ಟೇಕ್ ವಿಚಾರವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅಸಮಾಧಾನ ವ್ಯಕ್ತಪಡಿಸಿದ್ದರೆ, ಕ್ರಮಸಂಖ್ಯೆ ಆದ್ಯತೆ ಬಗ್ಗೆ ಬಿಎಸ್ಪಿ ಅಭ್ಯರ್ಥಿ ನಂಜುಡಸ್ವಾಮಿ ಆಕ್ಷೇಪಿಸಿದ್ದಾರೆ.
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ, ನನ್ನ ಪೂರ್ಣ ಹೆಸರು ಎ.ಸುಮಲತಾ ಅಂಬರೀಷ್ ಆಗಿದೆ. ಆದರೆ, ಬರೀ ಎ.ಸುಮಲತಾ ಅಂತ ನೀಡಿದ್ದಾರೆ ಎಂದು ದೂರಿದರು. ಜೆಡಿಎಸ್ ಅಭ್ಯರ್ಥಿಗಾದರೆ ಕ್ರಮ ಸಂಖ್ಯೆ ಒಂದು ನೀಡುತ್ತಾರೆ. ಆದರೆ, ನನಗೆ 20 ಸಂಖ್ಯೆ ನೀಡಲಾಗಿದೆ. ನನ್ನ ಹೆಸರಿನ ಮೇಲೆ ಮತ್ತು ಕೆಳಗೆ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದರೆ ನಮ್ಮ ಪಕ್ಷ ತೃತೀಯ ರಾಷ್ಟ್ರೀಯ ಪಕ್ಷ. ನಮಗೆ ಮೊದಲ ಕ್ರಮ ಸಂಖ್ಯೆ ನೀಡಬೇಕಾಗಿತ್ತು. ಆದರೆ, ಅದನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಾಗಿದೆ ಎಂದು ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಕೇಳುತ್ತೇವೆ. ಸಮರ್ಪಕ ಉತ್ತರ ಸಿಗದೇ ಇದ್ದರೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೆ ದೂರು ನೀಡುತ್ತೇವೆ ಎಂದು ಅವರು ಹೇಳಿದರು.





