ನಿಮ್ಮ ನೋಟಿಸ್ ಕಾನೂನು ಬಾಹಿರ: ಜಿಲ್ಲಾಧಿಕಾರಿಗೆ ಸುಮಲತಾ ಉತ್ತರ

ಮಂಡ್ಯ,ಮಾ.30: ನಿಮ್ಮ ವಿರುದ್ಧ ನನ್ನ ಮಾತು ವಾಸ್ತವಕ್ಕೆ ಅನುಗುಣವಾಗಿದ್ದು, ನಿಜಾಂಶದಿಂದ ಕೂಡಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜಿಲ್ಲಾಧಿಕಾರಿ ಎನ್.ಮಂಜುಶ್ರೀಗೆ ಪ್ರತ್ಯುತ್ತರ ನೀಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರ ಕ್ರಮಬದ್ಧ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ಜಿಲ್ಲಾಡಳಿತ ಸ್ಥಾನದ ಘನತೆಗೆ ಧಕ್ಕೆ ತರುವಂತೆ ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಕುರಿತು ಉತ್ತರ ನೀಡುವಂತೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸುಮಲತಾ ಅವರಿಗೆ ಒಂದು ದಿನದ ಕಾಲಾವಕಾಶ ನೀಡಿ ನೋಟಿಸ್ ಜಾರಿಗೊಳಿಸಿದ್ದರು.
ನಿಮ್ಮ ನಡವಳಿಕೆ, ರೀತಿ, ನೀತಿ ಗಮನಿಸಿದ್ದೇನೆ. ಅದರಿಂದ ವ್ಯಕ್ತವಾದ ಅಂಶಗಳನ್ನೇ ಸಾರ್ವಜನಿಕವಾಗಿ ಪ್ರತಿಬಿಂಬಿಸಿದ್ದೇನೆ. ಅಧಿಕಾರಿ,
ಸಿಬ್ಬಂದಿಯನ್ನು ಅಪಮಾನಗೊಳಿಸುವ ಹೇಳಿಕೆ ನೀಡಿಲ್ಲ. ವ್ಯಕ್ತಿಗತವಾಗಿ ಯಾರನ್ನೂ ಅವಹೇಳನ ಮಾಡಿಲ್ಲವೆಂದೂ ನೋಟಿಸ್‍ಗೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಐಪಿಸಿ 189ರಡಿಯಲ್ಲಿ ಕ್ರಮ ಕೈಗೊಳ್ಳುವ ಸಕಾರಣವಾಗಲಿ, ಅಪರಾಧವಾಗಲಿ, ತಪ್ಪಾಗಲಿ ನನ್ನಿಂದ ನಡೆದಿದಿಲ್ಲ. ನಿಮ್ಮ ನೋಟಿಸ್ ಕಾನೂನು ಬಾಹಿರವಾಗಿದ್ದು, ಕ್ರಮ ಕೈಗೊಳ್ಳಲು ಲಾಯಕ್ಕಾದ ಪ್ರಕ್ರಿಯೆಯಲ್ಲವೆಂದು ಛೇಡಿಸಿರುವ ಸುಮಲತಾ ಅಂಬರೀಷ್, ನೋಟಿಸ್ ಅನ್ನು ಈ ಹಂತದಲ್ಲೇ ಕೈಬಿಟ್ಟು, ನ್ಯಾಯ ಪರಿಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ.







