5ಜಿ ತಂತ್ರಜ್ಞಾನ ಬಳಸಿದ ಜಗತ್ತಿನ ಮೊದಲ ಜಿಲ್ಲೆ ಶಾಂಘೈ
ಬೀಜಿಂಗ್, ಮಾ. 30: 5ಜಿ ಜಾಲ ಮತ್ತು ಬ್ರಾಡ್‌ಬ್ಯಾಂಡ್ ಗಿಗಾಬಿಟ್ ನೆಟ್‌ವರ್ಕ್ - ಎರಡನ್ನೂ ಬಳಸುತ್ತಿರುವ ಜಗತ್ತಿನ ಮೊದಲ ಜಿಲ್ಲೆ ತಾನಾಗಿದ್ದೇನೆ ಎಂದು ಚೀನಾದ ಶಾಂಘೈ ಶನಿವಾರ ಹೇಳಿಕೊಂಡಿದೆ.
ಮುಂದಿನ ತಲೆಮಾರಿನ ಮೊಬೈಲ್ ನೆಟ್‌ವರ್ಕ್ ಅಭಿವದ್ಧಿ ಪಡಿಸುವ ಸ್ಪರ್ಧೆಯಲ್ಲಿ ಅಮೆರಿಕ ಮತ್ತು ಇತರ ದೇಶಗಳನ್ನು ಹಿಂದಿಕ್ಕಲು ಚೀನಾ ದೃಢನಿರ್ಧಾರ ಮಾಡಿದೆ.
5ಜಿ ಹೊಸ ತಲೆಮಾರಿನ ಮೊಬೈಲ್ ತಂತ್ರಜ್ಞಾನವಾಗಿದ್ದು, ಅದರ ಡೌನ್‌ಲೋಡ್ ವೇಗ 4ಜಿ ಎಲ್‌ಟಿಇ ಜಾಲಕ್ಕಿಂತ 10ರಿಂದ 100 ಪಟ್ಟು ಹೆಚ್ಚಾಗಿದೆ.
5ಜಿ ತಂತ್ರಜ್ಞಾನ ಮತ್ತು ಬ್ರಾಡ್‌ಬ್ಯಾಂಡ್ ಗಿಗಾಬಿಟ್ ನೆಟ್‌ವರ್ಕ್- ಈ ಎರಡನ್ನೂ ಅಭಿವೃದ್ಧಿಪಡಿಸಿರುವ ಮೊದಲ ಜಿಲ್ಲೆ ಶಾಂಘೈ ಆಗಿದೆ ಎಂದು ಸರಕಾರಿ ಒಡೆತನದ ‘ಚೀನಾ ಡೇಲಿ’ ವರದಿ ಮಾಡಿದೆ.
5ಜಿ ಮೊಬೈಲ್ ಜಾಲದ ಪ್ರಾಯೋಗಿಕ ಬಳಕೆಯು ಸರಕಾರಿ ಒಡೆತನದ ಟೆಲಿಕಾಂ ಸಂಸ್ಥೆ ‘ಚೀನಾ ಮೊಬೈಲ್’ನ ಬೆಂಬಲದೊಂದಿಗೆ ಶಾಂಘೈನ ಹೊಂಗ್‌ಕೌ ಎಂಬಲ್ಲಿ ಶನಿವಾರ ಅಧಿಕೃತವಾಗಿ ಆರಂಭಗೊಂಡಿದೆ. ಇಲ್ಲಿ ಸಂಪೂರ್ಣ ಸೇವೆಗಾಗಿ ಕಳೆದ ಮೂರು ತಿಂಗಳ ಅವಧಿಯಲ್ಲಿ 5ಜಿ ‘ಬೇಸ್ ಸ್ಟೇಶನ್’ಗಳನ್ನು ಸ್ಥಾಪಿಸಲಾಗಿದೆ ಎಂದು ಪತ್ರಿಕೆ ಹೇಳಿದೆ.