ಆಶ್ರಯಧಾಮ ಲೈಂಗಿಕ ದೌರ್ಜನ್ಯ ಪ್ರಕರಣ: 21 ಆರೋಪಿಗಳ ವಿರುದ್ಧ ನ್ಯಾಯಾಲದಿಂದ ಆರೋಪ ಪಟ್ಟಿ ರಚನೆ
ಹೊಸದಿಲ್ಲಿ, ಮಾ. 30: ಮುಝಫ್ಫರ್ ಆಶ್ರಯ ಧಾಮ ಲೈಂಗಿಕ ಹಗರಣದ ಎಲ್ಲ ಆರೋಪಿಗಳ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕ್ರಿಮಿನಲ್ ಪಿತೂರಿ ಸಹಿತ ವಿವಧ ಆರೋಪಗಳನ್ನು ಹೊಸದಿಲ್ಲಿ ನ್ಯಾಯಾಲಯ ಶನಿವಾರ ರೂಪಿಸಿದೆ. 21 ಆರೋಪಿಗಳ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುರಭ್ ಕುಲಶ್ರೇಷ್ಠ, ಮೇಲ್ನೋಟಕ್ಕೆ ಇವರ ವಿರುದ್ಧ ಸಾಕಷ್ಟು ಪುರಾವೆಗಳು ಇವೆ ಎಂದಿದ್ದಾರೆ.
ಅತ್ಯಾಚಾರ ಹಾಗೂ ಕ್ರಿಮಿನಲ್ ಪಿತೂರಿ ಅಲ್ಲದೆ, ಪೋಕ್ಸೊ ಕಾಯ್ದೆ ಅಡಿಯ ವಿವಿಧ ಕಲಂಗಳು ಹಾಗೂ ಇತರ ಆರೋಪಗಳ ಅಡಿಯಲ್ಲಿ ಆರೋಪ ರೂಪಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಮುಂದೆ ಹಾಜರಾದ ಎಲ್ಲ ಆರೋಪಿಗಳು ತಾವು ಅಮಾಯಕರು ಎಂದು ಹಾಗೂ ವಿಚಾರಣೆ ಎದುರಿಸುವುದಾಗ ಮನವಿ ಮಾಡಿದರು.
ಈ ಅಪರಾಧಕ್ಕೆ ಕನಿಷ್ಠ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆಯಾಗುತ್ತದೆ. ಎಲ್ಲ 20 ಮಂದಿ ಆರೋಪಿಗಳ ವಿರುದ್ಧ ಅಪ್ರಾಪ್ತರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕ್ರಿಮಿನಲ್ ಪಿತೂರಿಯ ಆರೋಪ ರೂಪಿಸಲಾಗಿದೆ. ಅಪ್ರಾಪ್ತರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಅಮಲು ಪದಾರ್ಥ ನೀಡಿರುವುದು, ಕ್ರಿಮಿನಲ್ ಬೆದರಿಕೆ ಮೊದಲಾದ ಇತರ ಆರೋಪಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.





