ಪೂರ್ವ ವಲಯ ಐಜಿಪಿ ಸೌಮೇಂದು ಮುಖರ್ಜಿ ಅಧಿಕಾರ ಸ್ವೀಕಾರ

ದಾವಣಗೆರೆ,ಮಾ.30: ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕರಾಗಿ (ಐಜಿಪಿ) ಸೌಮೇಂದು ಮುಖರ್ಜಿ ಅವರು ಅಧಿಕಾರ ಸ್ವೀಕರಿಸಿದರು.
1998 ರ ಐಪಿಎಸ್ ಬ್ಯಾಚ್‍ನ ಅಧಿಕಾರಿಯಾಗಿರುವ ಸೌಮೇಂದು ಮುಖರ್ಜಿಯವರು ಈ ಹಿಂದೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿಯಾಗಿ ಹಾಗೂ ಅಗ್ನಿ ಶಾಮಕ ಮತ್ತು ಕೆಎಸ್‍ಆರ್‍ಟಿಸಿ ಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಇದೇ ಮೊದಲು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಂಕಿ ಅಂಶಗಳನ್ನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳೊಂದಿಗೆ ನಡೆಸುವ ಸಭೆಗಳಲ್ಲಿ ಪರಾಮರ್ಷಿಸುತ್ತೇನೆ. ಹಾಗೂ ಹಿರಿಯ ಅಧಿಕಾರಿಯಾಗಿ ಕಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲಾಗುವುದೆಂದರು.
ಲೋಕಸಭಾ ಚುನಾವಣೆಯ ಬಂದೋಬಸ್ತ್ ಬಗ್ಗೆ ಪ್ರತಿಕ್ರಿಯಿಸಿ ಈ ಹಿಂದಿನ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿದ್ದು ಚುನಾವಣಾ ಬಂದೋಬಸ್ತ್ ಕೈಗೊಳ್ಳಲಾಗುವುದೆಂದರು. ಇತ್ತೀಚಿನ ದಿನಗಳಲ್ಲಿ ಇಲಾಖೆಯಲ್ಲಿ ತಂತ್ರಜ್ಞಾನ ಮೇಲ್ಮಟ್ಟದಲ್ಲಿದ್ದು, ಅದನ್ನು ಯಶಸ್ವಿಯಾಗಿ ಬಳಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿವೆ ಎಂಬ ಪ್ರಶ್ನೆಗೆ, ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅಪಘಾತಗಳಿಗೆ ಕಾರಣಗಳನ್ನು ಹುಡುಕಲಾಗುವುದು ಎಂದರು. ಈ ಹಿಂದೆ ಕೆಎಸ್‍ಆರ್‍ಟಿಸಿಯಲ್ಲಿ ಕಾರ್ಯನಿರ್ವಹಿಸಿದ ಅವುಭವವಿದ್ದು, ಈ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಹಾಗೂ ಇಲಾಖೆಯಿಂದ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚಿಸಲಾಗುವು ಎಂದರು.
ಎಸ್ಪಿ ಆರ್.ಚೇತನ್, ಎಎಸ್ಪಿ ಟಿ.ಜೆ ಉದೇಶ ಅಧಿಕಾರಿಗಳು ಹಾಜರಿದ್ದರು.







