ಅರ್ಜೆಂಟೀನದ ಅಭಿಮಾನಿಗಳ ಟೀಕೆಗೆ ಮೆಸ್ಸಿ ಬೇಸರ

ಬ್ಯುನಸ್ ಐರಿಸ್, ಮಾ.30: ತಾಯ್ನಡಿನಲ್ಲಿ ತಾನು ಎದುರಿಸುತ್ತಿರುವ ನಿರಂತರ ಟೀಕೆಗಳಿಂದ ಬೇಸರಗೊಂಡಿರುವೆ ಎಂದು ಹೇಳಿರುವ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ, ಏಕೆ ದೇಶದ ಜನರು ನಿಮ್ಮನ್ನು ಇಷ್ಟೊಂದು ಟೀಕಿಸುತ್ತಾರೆ ಎಂದು ತನ್ನ ಆರು ವರ್ಷದ ಮಗ ನನ್ನನ್ನು ಕೇಳುತ್ತಿದ್ದಾನೆ ಎಂದಿದ್ದಾರೆ.
ಮೆಸ್ಸಿ ಅವರು ತಾನು ಪ್ರತಿನಿಧಿಸುತ್ತಿರುವ ಬಾರ್ಸಿಲೋನ ಫುಟ್ಬಾಲ್ ಕ್ಲಬ್‌ನಲ್ಲಿ ತೋರಿಸುವಷ್ಟು ಉತ್ಸಾಹವನ್ನು ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಲ್ಲಿ ತೋರಿಸುತ್ತಿಲ್ಲ ಎಂದು ಅರ್ಜೆಂಟೀನ ಅಭಿಮಾನಿಗಳು ಟೀಕಿಸುತ್ತಿದ್ದಾರೆ.
ಕಳೆದ ವರ್ಷ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನ ತಂಡ ಫ್ರಾನ್ಸ್ ವಿರುದ್ಧ ಸೋತ ಬಳಿಕ ಮೆಸ್ಸಿ ವೌನಕ್ಕೆ ಶರಣಾಗಿರುವುದನ್ನು ಅರ್ಜೆಂಟೀನದ ಫುಟ್ಬಾಲ್ ಅಭಿಮಾನಿಗಳು ಪ್ರಶ್ನಿಸಿದ್ದರು. ‘‘ನಾನು ಆ ಸೋಲನ್ನು ಮರೆತು, ತಂಡದಿಂದ ಸ್ವತಃ ದೂರ ಉಳಿಯಲು ಬಯಸಿದ್ದೆ. ವೃತ್ತಿ ಜೀವನಚಕ್ರ ಈ ರೀತಿ ಕೊನೆಯಾಗಿದ್ದು ನೋಡಿ ನೋವಾಗುತ್ತದೆ. ನಾನು ತಂಡಕ್ಕೆ ವಾಪಸಾಗಬಾರದು ಎಂದು ಹೆಚ್ಚಿನವರ ಒತ್ತಾಯವಾಗಿದೆ. ಅವರು ನಿಮ್ಮನ್ನು ಅರ್ಜೆಂಟೀನದಲ್ಲಿ ಕೊಲ್ಲುತ್ತಿರುವುದೇಕೆ? ಎಂದು ಸ್ನೇಹಿತರು, ನನ್ನ ಆರು ವರ್ಷದ ಪುತ್ರ ನನ್ನನ್ನು ಪ್ರಶ್ನಿಸಿದ್ದಾನೆ’’ ಎಂದು 31ರ ಹರೆಯದ ಅರ್ಜೆಂಟೀನ ನಾಯಕ ಮೆಸ್ಸಿ ಹೇಳಿದ್ದಾರೆ.
‘‘ನನಗೆ ಪ್ರತಿಷ್ಠಿತ ಟೂರ್ನಮೆಂಟ್ ಗೆಲ್ಲಬೇಕೆಂಬ ಆಸೆಯಿದೆ. ಕೋಚ್ ಲಿಯೊನೆಲ್ ಸ್ಕಾಲೊನಿ ಮಾರ್ಗದರ್ಶನದಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುವೆ. 2014ರ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿರುವುದು, ಎರಡು ಬಾರಿ ಕೋಪಾ ಅಮೆರಿಕ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿರುವುದು ಸೇರಿದಂತೆ ಈಗಾಗಲೇ ಅಮೋಘ ಸಾಧನೆ ಮಾಡಿದ್ದೇವೆ’’ ಎಂದು 5 ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿ ಜಯಿಸಿರುವ ಮೆಸ್ಸಿ ಹೇಳಿದ್ದಾರೆ.







